ಜಿಲ್ಲೆ

ಮಹಿಷ ದಸರಾ ಸಮಿತಿಯಿಂದ ದಸರಾ ಉತ್ಸವಕ್ಕೆ ಅಡ್ಡಿ ಪಡಿಸುವ ಎಚ್ಚರಿಕೆ

ಮೈಸೂರು: ಮಹಿಷ ದಸರಾವನ್ನು ಸುಸೂತ್ರವಾಗಿ ಆಚರಿಸಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅವಕಾಶ ನೀಡಲಿಲ್ಲ. ಹೀಗಾಗಿ ಈ ಬಾರಿಯ ನಾಡಹಬ್ಬ ದಸರಾ ಉತ್ಸವಕ್ಕೆ ಅಡ್ಡಿ ಪಡಿಸಲಾಗುವುದು ಎಂದು ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಎಚ್ಚರಿಕೆ ನೀಡಿದ್ದಾರೆ.

ನಗರದ ಪುರಭವ ಆವರಣದಲ್ಲಿ ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಿಷ ಮಂಡಲೋತ್ಸವ (ಮಹಿಷ ದಸರಾ) ಕಾರ್ಯಕ್ರಮದಲ್ಲಿ ಮಾತನಾಡಿ, ದಸರಾ ಉತ್ಸವವನ್ನು ನೀವು ಯಾವ ರೀತಿ ಆಚರಿಸುತ್ತಿರೋ ನಾವು ನೋಡುತ್ತೇವೆ. ದಸರಾ ಉದ್ಘಾನೆ ಹೇಗೆ ಮಾಡುತ್ತಿರೋ ನೋಡೋಣ. ಈ ವಿಚಾರವಾಗಿ ಜಿಲ್ಲಾಡಳಿತಕ್ಕೆ ಸವಾಲು ಹಾಕುತ್ತೇವೆ. ದಸರಾವನ್ನು ನಾವು ಧಿಕ್ಕರಿಸಬೇಕು. ಅಗತ್ಯ ಬಿದ್ದರೆ ಪ್ರಾಣ ತ್ಯಾಗ್ಯ ಮಾಡಲು ಸಿದ್ಧರಿರಬೇಕು. ಈ ಸಮುದಾಯಕ್ಕೆ ನ್ಯಾಯ ಕೊಡಲು ರಕ್ತವನ್ನು ಸಹ ಹರಿಸಬೇಕಾಗುತ್ತದೆ ಎಂದರು.

ದಸರಾ ಉದ್ಘಾಟನೆ ಹಾಗೂ ಜಂಬೂಸವಾರಿ ಮೆರವಣಿಗೆಯನ್ನು ಯಾವ ರೀತಿ ನಡೆಸುತ್ತಿರೋ ನೋಡುತ್ತೇನೆ. ಈ ಬಾರಿಯ ದಸರಾ ರಾಜ್ಯ ಹಾಗೂ ದೇಶಕ್ಕೆ ಕೆಟ್ಟ ಸಂದೇಶ ಹೋಗಬೇಕು. ನಮ್ಮ ಸಂಸ್ಕೃತಿಗೆ ಅಡಚಣೆ ಮಾಡಿದರೆ ನಾವು ಈ ಬಾರಿಯ ದಸರಾವನ್ನು ಧಿಕ್ಕರಿಸುತ್ತೇವೆ ಹಾಗೂ ದೇಶದ ವಿವಿಧೆಡೆಯಿಂದ ದಸರಾ ಉತ್ಸವಕ್ಕೆ ಬರುವವರನ್ನು ತಡೆಯುತ್ತೇವೆ. ಪೊಲೀಸರು ಹಾಗೂ ಜಿಲ್ಲಾಡಳಿತ ದಿಂದ ನಮಗೆ ದೌರ್ಜನ್ಯ ನಡೆಯುತ್ತಿದೆ. ಹಾಗಾಗಿ ಈ ಬಾರಿ ದಸರಾ ಉತ್ಸವ ನಡೆಸಲು ಬಿಡುವುದಿಲ್ಲ ಎಂಬ ಸಂದೇಶ ನೀಡೋಣ. ಹಾಗಾಗಿ ದಸರಾ ಉತ್ಸವಕ್ಕೆ ಬರುವ ಬಸ್, ರೈಲುಗಳನ್ನು ತಡೆಯಬೇಕು ಎಂದು ಕರೆ ನೀಡಿದರು.

ಬಹಳ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಗಬೇಕಾಗಿತ್ತು. ಆದರೆ, ಸರ್ಕಾರ ಅವಕಾಶ ಮಾಡಿಕೊಡಲಿಲ್ಲ. ನಮ್ಮ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಮಹಿಷನನ್ನು ಗೌರವಿಸಲು ದೊಣ್ಣೆ ನಾಯಕರ ಅಪ್ಪಣೆ ಬೇಕಾಗಿಲ್ಲ. ನಾವು ಯಾವುದೇ ಧರ್ಮದ ವಿರುದ್ಧ ಮಾತನಾಡು ವುದಿಲ್ಲ, ನಾವು ಶಾಂತಿ ಪ್ರಿಯರು. ಶಾಂತಿಪ್ರಿಯರಾದ ಬುದ್ಧ ಹಾಗೂ ಅಂಬೇಡ್ಕರ್ ಅವರ ಅನುಯಾಯಿಗಳು ನಾವು. ಹಾಗಂತ ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಸಿದರು.

ದಸರಾ ಜಂಬೂಸವಾರಿ ನಡೆಯುವ ಅ.12 ರಂದು ಅಶೋಕ ಚಕ್ರವರ್ತಿಯ ಭಾವಚಿತ್ರ ಇಟ್ಟು ಅಶೋಕಪುರ ಉದ್ಯಾನದಿಂದ ಪುರಭವನ ಮೆರವಣಿಗೆ ನಡೆಸಲಾಗುವುದು. ಜಂಬೂಸವಾರಿಗೆ ಪರ್ಯಾಯವಾಗಿ ಈ ಮೆರವಣಿಗೆ ನಡೆಸಲಾಗುವುದು. ಈ ಮೆರವಣಿಗೆಗೆ ಜಿಲ್ಲಾಡಳಿತ ಅನುಮತಿ ನೀಡಬೇಕು, ಇಲ್ಲವಾದಲ್ಲಿ ಜಂಬೂಸವಾರಿ ಮೆರವಣಿಗೆ ನಿಲ್ಲಿಸಬೇಕು. ವಿಜಯದಶಮಿ ಅಂದರೆ ಹೇಡಿಗಳ ವಿಜಯದಶಮಿಯಲ್ಲ, ಅದು ಅಶೋಕನ ವಿಜಯದಶಮಿ. ಹಾಗಾಗಿ ವಿಜಯದಶಮಿ ದಿನದಂದು ಅಶೋಕ ಚಕ್ರವರ್ತಿಯ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸೋಣ ಎಂದು ಕರೆ ನೀಡಿದರು.

ನಗರದ ಶ್ರೀ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ನಮ್ಮ ಚರಿತ್ರೆ ಹಾಗೂ ಇತಿಹಾಸ ಮರೆತರೆ ನಮಗೆ ಎಂತಹ ಶಿಕ್ಷೆ ಆಗುತ್ತದೆ ಎಂಬುದಕ್ಕೆ ಮಹಿಷ ದಸರಾ ಸಾಕ್ಷಿಯಾಗಿದೆ. ನಾವು ಇತಿಹಾಸ ಹಾಗೂ ಚರಿತ್ರೆ ಮರೆತ ಹಿನ್ನೆಲೆಯಲ್ಲಿ ನಾವು ಬೇಡುವ ಸ್ಥಿತಿಯಲ್ಲಿ ಇದ್ದೇವೆ. ಜಿಲ್ಲಾಡಳಿತ ಮಹಿಷ ದಸರಾಗೆ ಅಡ್ಡಿ ಪಡಿಸಿದೆ. ಇದು ಮಹಿಷನ ಸಮಸ್ಯೆಯಲ್ಲ. ಬದಲಾಗಿ ಇದು ರಾಜಕೀಯ ಪಕ್ಷಗಳ ಮತದ ಸಮಸ್ಯೆಯಾಗಿದೆ. ಹಿಂದುತ್ವ ಹಾಗೂ ಜಾತ್ಯತೀತ ಎಂಬುದು ಓಟ್ ಬ್ಯಾಂಕ್ ಆಗಿದೆ. ಈ ಕಾರಣಕ್ಕೆ ಮಹಿಷ ದಸರಾಗೆ ಅಡ್ಡಿ ಪಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಷನನ್ನು ದೆವ್ವ ಅಂದವನಿಗೆ ಶಾಪ ತಟ್ಟಿದೆ. ಮಹಿಷನನ್ನು ಪ್ರಾರ್ಥಿಸುವವರಿಗೆ ಮಹಿಷನಂತಹ ಮಕ್ಕಳು ಹುಟ್ಟಲಿ ಎಂದು ಹಾರೈಸಿದ್ದಾರೆ. ಅವರ ಹಾರೈಕೆಯಂತೆ ನಮಗೆ ಮಹಿಷನಂತಹ ಮಕ್ಕಳೇ ಹುಟ್ಟಲಿ. ಆದರೆ, ಅವರು ಗಣಪತಿ, ಆಂಜನೇಯನನ್ನು ಪೂಜಿಸುತ್ತಾರೆ. ಒಂದುವೇಳೆ ಗಣಪತಿ ಹಾಗೂ ಆಂಜನೇಯನಂತಹ ಮಕ್ಕಳು ಅವರಿಗೆ ಹುಟ್ಟಿದರೆ ಆ ಮಕ್ಕಳನ್ನು ಕರೆದೊಂಡು ವಾಕಿಂಗ್ ಹೋಗಲು ಸಾಧ್ಯವೇ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.

ಮಹಿಷಾಸುರ ಅತ್ಯಂತ ಶೂರನಾದ ವ್ಯಕ್ತಿ. ಹರಿಹರ, ಬ್ರಹ್ಮನನ್ನೇ ಅಟ್ಟಾಡಿಸಿಕೊಂಡು ಹೊಡೆದಿದ್ದಾನೆ. ಮಹಿಷನನ್ನು ಕಂಡರೆ ಎಲ್ಲರಿಗೂ ಭಯ ಇತ್ತು. ಅಂತಹ ಶೂರ ವ್ಯಕ್ತಿಯನ್ನು ನಾವು ಆರಾಧಿಸುತ್ತಿದ್ದೇವೆ. ಮಹಿಷಾಸುರನ ವಿರುದ್ಧ ಸುಳ್ಳಿಯ ಇತಿಹಾಸವನ್ನು ಸೃಷ್ಟಿಸಲಾಗುತ್ತಿದ್ದು, ನಾವು ಜನತೆಗೆ ಸತ್ಯ ತಿಳಿಸಬೇಕು ಎಂದರು.

ಚಾಮುಂಡಿಬೆಟ್ಟದಲ್ಲಿ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆಗೆ ಜಿಲ್ಲಾಡಳಿತ ಅವಕಾಶ ನೀಡಬೇಕು. ನಮ್ಮ ಮೂಲಭೂತ ಹಕ್ಕಿಗೆ ಧಕ್ಕೆ ತಂದರೆ ಸಹಿಸುವುದಿಲ್ಲ. ಕಳೆದ 5 ವರ್ಷಗಳಿಂದ ನಿರಂತರವಾಗಿ ಮಹಿಷ ದಸರಾಗೆ ಅಡ್ಡಿ ಪಡಿಸಲಾಗುತ್ತಿದೆ. ನಮಗೆ ಪುಷ್ಪಾರ್ಚನೆಗೆ ಅವಕಾಶ ನೀಡದೆ ಇದ್ದರೆ ನೀವು ದಸರಾ ಹೇಗೆ ನಡೆಸುತ್ತೀರಾ ನೋಡೋಣ ಎಂದು ಸವಾಲು ಹಾಕಿದರು.

ಲೇಖಕ ಯೋಗೇಶ್ ಮಾಸ್ಟರ್ ಮಾತನಾಡಿ, ಮಹಾರಾಷ್ಟ್ರದಲ್ಲಿ ಮಹಿಷನ ದೇವಸ್ಥಾನ ಇದೆ. ಮಹಿಷನ ಬಗ್ಗೆ ಮರೆಮಾಚಿರುವ ಇತಿಹಾಸ ಹೊರೆತರುವ ಕಾರ್ಯ ಆಗಬೇಕು. ಜನರನ್ನು ರಕ್ಷಣೆ ಮಾಡುತ್ತಿದ್ದವರನ್ನೇ ರಾಕ್ಷಕರು ಎಂದು ಬಿಂಬಿಸಲಾಗಿದೆ. ಒಂದು ವರ್ಗ ರಾಕ್ಷಕರ ಕುರಿತು ಕೆಟ್ಟದಾಗಿ ಬಿಂಬಿಸಿರುವುದನ್ನು ನಾವು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದರು.

ಚಂಡ ಮುಂಡರನ್ನು ಕೊಂದವಳು ಚಾಮುಂಡಿ. ಆದರೆ, ಆಕೆ ಮಹಿಷ ಮರ್ಧಿನಿ ಹೇಗೆ ಆದಳು ಎಂಬುದಕ್ಕೆ ಉತ್ತರ ಕಂಡುಕೊಳ್ಳ ಬೇಕು. ಚಾಮುಂಡಿ ಬೆಟ್ಟದಲ್ಲಿರುವುದು ಚಾಮುಂಡೇಶ್ವರಿಯೋ ಅಥವಾ ಯಕ್ಷಿಣಿಯೋ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಲೇಖಕ ಶಿವಸುಂದರ್ ಮಾತನಾಡಿ, ನಮ್ಮ ಆಚರಣೆಗಳಿಗೆ ಯಾವುದೇ ಸರ್ಕಾರ ಅಡ್ಡಿ ಪಡಿಸಬಾರದು. ಇದು ಮೂಲಭೂತ ಹಕ್ಕಿನ ಮೊಟಕಾಗಿದೆ. ನನ್ನ ದೇವರನ್ನು ಪೂಜಿಸಿದರೆ ನಿಮಗೆ ನೋವಾಗುತ್ತದೆ ಎಂದರೆ ನಾವು ಏನು ಮಾಡಲು ಸಾಧ್ಯ? ನಾವು ಮಹಿಷನನ್ನು ಪೂಜೆ ಮಾಡಿದರೆ ಬೇರೆಯವರ ಭಾವನೆಗೆ ಹೇಗೆ ಧಕ್ಕೆ ಉಂಟಾಗಲು ಸಾಧ್ಯ? ನಮ್ಮ ದೇವರನ್ನು ರಾಕ್ಷಕರು ಎಂದು ಬಿಂಬಿಸಿ ನಮ್ಮನ್ನು ಮತ್ತೆ ದಾಸ್ಯಕ್ಕೆ ದೂಡುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಬುದ್ಧ ವಿಹಾರದ ಬೋಧಿದತ್ತ ಬಂತೇಜಿ, ಪ್ರಗತಿಪರ ಚಿಂತಕ ಕೆ.ಎಸ್. ಭಗವನಾನ್, ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್, ಚಿಂತಕ ಸಿದ್ದಸ್ವಾಮಿ ಹಾಗೂ ಇತರರು ಇದ್ದರು.