ನವೀನ ಎಂ.ಬಿ. ದಾವಣಗೆರೆ: ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಚನ್ನಗಿರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮೂರೂ ಪ್ರಮುಖ ಪಕ್ಷಗಳು ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲರ ಪುತ್ರ, ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಅವರಿಗೆ ಆಹ್ವಾನ ನೀಡಿವೆ ಎನ್ನಲಾಗಿದೆ.
ಕಾಂಗ್ರೆಸ್, ಬಿಜೆಪಿ, ಜಾತ್ಯತೀತ ಜನತಾದಳ ಹೀಗೆ ಮೂರೂ ಪಕ್ಷಗಳಿಂದ ಆಹ್ವಾನ ಬಂದಿದ್ದನ್ನು ಖುದ್ದು ಮಹಿಮಾ ಪಟೇಲ್ ಅವರು ದೃಢಪಡಿಸಿದ್ದಾರೆ.
ವಿಚಾರಧಾರೆಗಳು ವಿಭಿನ್ನವಾದರೂ ಪಟೇಲರ ಸ್ನೇಹವಲಯದಲ್ಲಿದ್ದ ಕೆಲವು ಆರ್‌ಎಸ್‌ಎಸ್ ಮುಖಂಡರು ಮಹಿಮಾ ಕುಟುಂಬ ವರ್ಗವನ್ನು ಸಂಪರ್ಕಿಸಿ ಬಿಜೆಪಿಯಿಂದ ಕಣಕ್ಕಿಳಿಯುವಂತೆ ಸಲಹೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಮುಖಂಡರು ಕೂಡ ನೇರವಾಗಿ ಸಂಪರ್ಕಿಸಿ, ರಾಜಕೀಯವಾಗಿ ನಿಮ್ಮ - ನಮ್ಮ ನಿಲುವುಗಳು ಒಂದೇ. ಟಿಕೆಟ್ ನೀಡುತ್ತೇವೆ. ಚುನಾವಣೆಗೆ ರೆಡಿಯಾಗಿ ಎಂಬ ಸಂದೇಶ ನೀಡಿದ್ದಾರೆಂದು ಹೇಳಲಾಗಿದೆ.
ಇನ್ನೊಂದೆಡೆ ಜೆಡಿಎಸ್ ಕೂಡ ಆಹ್ವಾನ ನೀಡಿದೆ. ಜೆ.ಎಚ್.ಪಟೇಲರು- ದೇವೇಗೌಡರ ಕುಟಂಬಕ್ಕೆ ಆತ್ಮೀಯರಾದ ಹಿರಿಯ ನಾಯಕರೊಬ್ಬರ ಮೂಲಕ ಸಂಪರ್ಕಿಸಿ ಅಭ್ಯರ್ಥಿ ಆಗುವಂತೆ ಮನವೊಲಿಸುವ ಪ್ರಯತ್ನ ಮಾಡಿದೆ.
ಆದರೆ, ಮೂರೂ ಪಕ್ಷಗಳ ಆಹ್ವಾನವನ್ನು ನಯವಾಗಿ ನಿರಾಕರಿಸಿರುವ ಮಹಿಮಾ, ಸಂಯುಕ್ತ ಜನತಾದಳ ಹೊರತುಪಡಿಸಿ ಬೇರಾವುದೇ ಪಕ್ಷದಿಂದ ಸ್ಪರ್ಧಿಸಲಾರೆ ಎಂದು ಖಂಡತುಂಡವಾಗಿ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇರಾದೆ ನನ್ನದು. ಹಾಗೊಂದು ವೇಳೆ ವಿಧಾನಸಭೆಗೇ ಸ್ಪರ್ಧೆ ಮಾಡಬೇಕು ಎಂದಾದರೆ ಚನ್ನಗಿರಿಯ ಒಂದು ಲಕ್ಷ ಜನರು ಬಯಸಿದರೆ ಮಾತ್ರ ಎಂದಿದ್ದಾರೆ.
ಬೇರೆಯವರ ಸಮಾಧಿಯ ಮೇಲೆ ಮನೆ ಕಟ್ಟಲಾರೆ: ಬೇರೆಯವರು ತೊಂದರೆಯಲ್ಲಿದ್ದಾರೆಂದು ಅವರ ಸಮಾಧಿಯ ಮೇಲೆ ಮನೆ ಕಟ್ಟುವ ಕೆಲಸವನ್ನು ನಾನು ಮಾಡಲು ಹೋಗುವುದಿಲ್ಲ. ನನ್ನ ರಾಜಕಾರಣ ಕಡೇ ಪಕ್ಷ ನನಗೆ ಮರ್ಯಾದೆ ತರುವಂತಿರಬೇಕು ಎಂಬ ಮನಸ್ಥಿತಿ ನನ್ನದು. ಈಗಲೂ ನನಗಿರುವ ಒಂದೇ ಸಮಾಧಾನ ಎಂದರೆ ನನಗೆ ನಾನು ಮರ್ಯಾದೆ ಇಟ್ಟುಕೊಂಡಿದ್ದೇನೆ ಎಂಬುದೇ.
ಬಿಜೆಪಿಯಲ್ಲಿ ನಡೆದ ಬೆಳವಣಿಗೆಗಳಿಂದ ನನಗೆ ಅವಕಾಶ ಸಿಗುತ್ತದೆ ಎಂದು ಕೆಲವರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಮಹಿಮಾ ಪಟೇಲ್ ನೀಡಿದ ಮಾರ್ಮಿಕ ಪ್ರತಿಕ್ರಿಯೆ ಇದು. ಇಂಥ ವಿಚಾರಗಳಲ್ಲಿ ನಾನು ವಾಸ್ತವವಾದಿ ಅಲ್ಲ ಎಂದರೂ ಪರವಾಗಿಲ್ಲ. ನನ್ನ ವಿಚಾರಗಳಿಂದ ನಾನು ದೂರ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.