ಮಂಡ್ಯ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಜಿಲ್ಲಾ ಮಹಿಳೋದಯ ಮಹಿಳಾ ಒಕ್ಕೂಟದ ಕಾರ್ಯಕರ್ತೆಯರು ಪ್ರತಿಭಟಿಸಿದರು.
ಸರ್‌ಎಂವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಒಕ್ಕೂಟದ ಕಾರ್ಯಕರ್ತೆಯರು, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ, ಹಿಂಸಾಚಾರ ತಡೆಯಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದರು.
ಮಣಿಪುರದಲ್ಲಿ ರಾಜಕೀಯ ವ್ಯಕ್ತಿಗಳ ಕುಮ್ಮುಕ್ಕಿನಿಂದ ಮತ್ತು ನೇರ ಸಹಕಾರದಿಂದ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕಾಯಾರ್ಂಗದ ಅಧಿಕಾರ ಪಡೆದು ಜವಾಬ್ದಾರಿಯುತ ಸ್ಥಾನದಲ್ಲಿವರು ನಾಗರೀಕರು, ಮಹಿಳೆಯರಿಗೆ ರಕ್ಷಣೆ ನೀಡಬೇಕು. ಆದರೆ, ಪೊಲೀಸ್ ಇಲಾಖೆ ಸತ್ತಂತೆ ವರ್ತಿಸುತ್ತಿದೆ. ಅಧಿಕಾರಿಗಳ ದರ್ಪ, ದಬ್ಬಾಳಿಕೆಗೆ ಕೊನೆ ಇಲ್ಲದಂತಾಗಿದೆ. ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದು 78 ದಿನದವರೆಗೆ ರಾಜಕೀಯ ಉದ್ದೇಶದಿಂದ ಸಮಾಜಘಾತಕ ಶಕ್ತಿಗಳ ವಿರುದ್ಧ ಕ್ರಮವಹಿಸದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೇಜವಾಬ್ದಾರಿತನವನ್ನು ಪ್ರತಿಭಟನಾಕಾರರು ಖಂಡಿಸಿದರು.
ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಮಣಿಪುರದಲ್ಲಿ ಹಿಂಸಾಚಾರ ತಡೆದು ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಮುಂದಾಗಬೇಕು. ಮಹಿಳೆಯರ ನಿರ್ಭೀತಿ ಬದುಕಿಗೆ ಕಾನೂನು ರೀತಿ ಸೂಕ್ತ ರಕ್ಷಣೆ ನೀಡಬೇಕು. ಮಹಿಳೆಯರ ಮೇಲೆ ದೌರ್ಜನ್ಯ, ಹಿಂಸೆ, ಅತ್ಯಾಚಾರ ಮಾಡುವವರಿಗೆ ತ್ವರಿತಗತಿಯಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಬೇಕು. ಶೋಷಣೆಗೊಳಗಾಗಿರುವ ಕುಟುಂಬಕ್ಕೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ನೀಡಬೇಕು. ಅತ್ಯಾಚಾರಿಗಳಿಗೆ ವಿಧಿಸುವ ಶಿಕ್ಷೆಯನ್ನು ಕಠಿಣಗೊಳಿಸಲು ಈಗಿರುವ ಶಿಕ್ಷೆಯ ವಿಧಾನವನ್ನು ಬದಲಿಸಬೇಕು. ದೌರ್ಜನ್ಯ ಪ್ರಕರಣ ಕುರಿತು ತುರ್ತು ವಿಚಾರಣೆ ನಡೆಸಿ ಶಿಕ್ಷಿಸುವ ಮೂಲಕ ಹಿಂಸಾಚಾರ ನಿರತರನ್ನು ಮಟ್ಟ ಹಾಕಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸೇರಿ ಕಾನೂನು ವ್ಯವಸ್ಥೆಗೆ ಮುಂದಾಗಿ ಜನಾಂಗೀಯ ಹಿಂಸಾಚಾರ ತಡೆಗಟ್ಟಿ ಶಾಂತಿ ನೆಲೆಸಲು ಕ್ರಮ ವಹಿಸಬೇಕು. ನಾಗರೀಕ ಸಮಾಜದಲ್ಲಿ ತಲೆತಗ್ಗಿಸುವಂತಹ ಇಂತಹ ಘಟನೆ ಮರುಕಳಿಸಬಾರದು. ಕಾನೂನು ವ್ಯವಸ್ಥೆ ಉತ್ತಮಗೊಳಿಸಬೇಕು. ಶಾಂತಿ ಮರು ಸ್ಥಾಪನೆಗೆ ಎಲ್ಲ ರೀತಿಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಭಾರತಿ, ಮೋಹಿದ್ದೀನ್, ಸೇಲ್ವಿ ಉಮಾ, ಭಾಗ್ಯಲಕ್ಷ್ಮೀ, ಶ್ರುತಿ, ಲೀಲಾವತಿ ಇತರರಿದ್ದರು.