ಜಿಲ್ಲೆ

ಮಹಿಳೆಯರ ಸ್ಥಿತಿ ಬದಲಾಗಲಿ, ನೋಡಲ್ ಅಧಿಕಾರಿ ಆರ್.ವೆಂಕಟೇಶ್‌ರೆಡ್ಡಿ ಅಭಿಮತ, ಹಕ್ಕುಗಳ ರಕ್ಷಣೆಗೆ ವಿಶೇಷ ಸಭೆ

ನೆಲಮಂಗಲ: ಮಹಿಳೆಯರು ಮತ್ತು ಮಕ್ಕಳ ಸಶಕ್ತರನ್ನಾಗಿಸಲು ಸಂವಿಧಾನ ವಿಶೇಷ ಹಕ್ಕು ನೀಡಿದ್ದರೆ ಸರ್ಕಾರ ವಿಶೇಷ ಸೌಕರ್ಯ ಅನುಷ್ಠಾನಗೊಳಿಸುತ್ತಿದೆ ಎಂದು ನೋಡಲ್ ಅಧಿಕಾರಿ ಆರ್.ವೆಂಕಟೇಶ್‌ರೆಡ್ಡಿ ತಿಳಿಸಿದರು.

ತಾಲೂಕಿನ ಬಸವನಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಗ್ರಾಮ ಪಂಚಾಯಿತಿ, ವಿಕಾಸ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಮತ್ತು ಮಹಿಳೆಯರ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಮಹಿಳೆಯರು ಮತ್ತು ಮಕ್ಕಳ ಸ್ಥಿತಿಗತಿ ಸಂಪೂರ್ಣ ಸುಧಾರಣೆಯಾಗಿಲ್ಲ. ಮಹಿಳೆ, ಮಕ್ಕಳ ದುರುಪಯೋಗ ಹೆಚ್ಚಾಗುತ್ತಿದ್ದು, ಸಮಾಜದ ಅಭ್ಯುದಯಕ್ಕೆ ತೊಡಕಾಗಿದೆ ಎಂದರು.

ಶಿಕ್ಷಣದ ಕೊರತೆ, ಮಾಹಿತಿ ಕೊರತೆಯಿಂದ ಹಕ್ಕು ಅನುಭವಿಸಲಾಗುತ್ತಿಲ್ಲ. ಇದನ್ನು ಮನಗಂಡ ಸರ್ಕಾರ ಮಹಿಳೆಯರು ಮಕ್ಕಳ ರಕ್ಷಣಾ ಕಾರ್ಯದಲ್ಲಿ ಜನಪ್ರತಿನಿಧಿ, ಅಧಿಕಾರಿಗಳು ಇಡೀ ಸಮಾಜವನ್ನು ತೊಡಗಿಸುವ ಉದ್ದೇಶದಿಂದ ವಿಶೇಷ ಸಭೆ ಆಯೋಜಿಸಿದೆ ಎಂದರು.

ವಿಕಾಸಸಂಸ್ಥೆ ಅಧ್ಯಕ್ಷ ಎಂ.ನಾಗರಾಜು ಮಾತನಾಡಿ, ಸಮಾಜದಲ್ಲಿ ಹೆಣ್ಣು ಭ್ರೂಣಹತ್ಯೆ, ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ನಡೆಯುತ್ತಿರುವುದು ಬೇಸರದ ಸಂಗತಿ. ಮಹಿಳೆಯರನ್ನು ಗೌರವಿಸಲು ಮಕ್ಕಳಲ್ಲಿ ಕಲಿಸಬೇಕು. ಮಾನವೀಯ ಹಾಗೂ ನೈತಿಕ ಮೌಲ್ಯ ಅರ್ಥ ಮಾಡಿಸಿದಿರುವುದರಿಂದ ಸಮಾಜದಲ್ಲಿ ಕೆಲ ಅನರ್ಥ ಸಂಭವಿಸುತ್ತಿವೆ ಎಂದರು.

ಬಸವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪೂರ್ಣಿಮಾ ಮಾತನಾಡಿ ಮಹಿಳೆಯರು ಮಕ್ಕಳ ಹಕ್ಕುಗಳ ಮಾಹಿತಿ ಜತೆಗೆ ಸಮಸ್ಯೆ ಚರ್ಚೆಗೆ ಸಭೆಯಲ್ಲಿ ಅವಕಾಶ ನೀಡಿರುವುದು ಸಂತೋಷತಂದಿದೆ. ಮಕ್ಕಳಿಗೆ ತಮ್ಮದೇ ಕನಸು, ಭಾವನೆ, ಗುರಿಗಳಿರುತ್ತವೆ. ಆ ಗುರಿ ಮುಟ್ಟಲು ಸಮಾಜ ಸಹಕಾರ ನೀಡಬೇಕು ಎಂದರು.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರತಿಭೆಯ ಅಭಿವ್ಯಕ್ತಿಗೆ ಮುಕ್ತ ಅವಕಾಶವಿದೆ ಎಂದರು.

ಗ್ರಾಮಪಂಚಾಯಿ ಅಧ್ಯಕ್ಷೆ ಮಾಜನ್‌ಬಿ, ಉಪಾಧ್ಯಕ್ಷ ವರದರಾಜು, ಸದಸ್ಯ ಉಮೇಶ್‌ಗೌಡ, ನರಸಿಂಹಮೂರ್ತಿ, ಜಯಮ್ಮ, ಎಂ.ಎಸ್.ಮಂಜುಳಾ, ನಾಗರತ್ನಮ್ಮ, ಗೌರಮ್ಮ, ಮಂಜುಳಾ, ಶಹಬಾನ್‌ತಾಜ್, ಪಿಡಿಒ ನವೀನ್, ಕಾರ್ಯದರ್ಶಿ ಶಿವರಾಮಯ್ಯ ಮುಖ್ಯಶಿಕ್ಷಕ ಪರಮೇಶ್ ಮತ್ತಿತರರು ಇದ್ದರು.

ಮಕ್ಕಳು ಮತ್ತು ಮಹಿಳೆಯರ ಮನವಿ: ಬಸವಹಳ್ಳಿ ಶಾಲಾ ಮುಂಭಾಗದ ರಸ್ತೆಯಲ್ಲಿ ರಸ್ತೆ ಉಬ್ಬು ಹಾಕುವುದು, ಲೋಹಿತನಗರ ಶಾಲೆ ಮುಂಭಾಗದ ಚರಂಡಿ ವ್ಯವಸ್ಥೆ, ನೀರಿನ ಸೌಕರ್ಯ ಒದಗಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರೆ ಲೋಹಿತನಗರ ಅಂಗನವಾಡಿಗೆ ನೀರಿನ ಸೌಲಭ್ಯ ಒದಗಿಸುವುದು, ಸ್ತ್ರೀಶಕ್ತಿ ಸಂಘ ಸಭೆ ನಡೆಸಲು ಸ್ಥಳವಕಾಶ ಒದಗಿಸುವುದು ಮಹಿಳೆಯರು ಮನವಿ ಮಾಡಿದರು.