ಜಿಲ್ಲೆ

ಆಯುರ್ವೇದ ಸತ್ವ ದೇಹಕ್ಕೆ ಸೇರುವ ತಿಂಗಳು ಆಷಾಢ

ಗೋಪಾಲಕೃಷ್ಣ ಪಾದೂರ್

ಉಡುಪಿ: ಸೊಪ್ಪು, ತರಕಾರಿ, ಆಟಿ ಕಷಾಯ ಹೀಗೆ ಪ್ರಕೃತಿಯೇ ಆಹಾರ ನೀಡುವ ಮಾಂತ್ರಿಕ ತಿಂಗಳು ಆಷಾಢ. ಈ ಸಮಯದಲ್ಲಿ ಆಯುರ್ವೇದ ಸತ್ವ ದೇಹಕ್ಕೆ ಸೇರುವುದರಿಂದ ವರ್ಷವಿಡೀ ಮನುಷ್ಯ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಹೀಗಾಗಿ ಭೂಮಿಯಲ್ಲಿ ಫಲ-ಪೈರು ಕಾಣಿಸಿಕೊಂಡು ಪ್ರಾಕೃತಿಕ ಸಂಪತ್ತು ತುಂಬಿರುವ ಜೀವಂತಿಕೆಯ ತಿಂಗಳು ಎಂದು ಮಂಗಳೂರು ವಿವಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಮುಖ್ಯಸ್ಥ ಗಣೇಶ್ ಅಮೀನ್ ಸಂಕಮಾರ್ ತಿಳಿಸಿದರು.

ಮಂಗಳವಾರ ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಬಂಟರ ಯಾನೆ ನಾಡವರ ಸಂಘದ ಆಶ್ರಯದಲ್ಲಿ ನಡೆದ ಆಟಿಡೊಂಜಿದಿನ ಮತ್ತು ಮಹಿಳೆಯರ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತುಂಬುವ ತಿಂಗಳು ಹಿಂದಿನ ಕಾಲದಲ್ಲಿ ಆಟಿ ತುಳುವರ ಕಷ್ಟದ ಕಾಲ. ನಿರಂತರ ಮಳೆಯಿಂದ ಸಂಪಾದನೆಯಿಲ್ಲದೆ ಊಟಕ್ಕೂ ತತ್ವಾರ. ಇಂಥ ಕಾಲದಲ್ಲಿ ಪ್ರಕೃತಿಯ ನೀಡುವ ಸೊಪ್ಪು ತರಕಾರಿಗಳನ್ನು ತಿಂದು ಹಿರಿಯರು ಆರೋಗ್ಯವಂತರಾಗಿದ್ದರು. ಈ ಚರಿತ್ರೆಗಳನ್ನು ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು. ತುಳುನಾಡಿನ ದುರಂತವೆಂದರೆ ಹಬ್ಬ ಮತ್ತು ಸಂಪ್ರದಾಯ ಆಚರಣೆಗೆ ಸೀಮಿತವಾಗಿದೆ. ಅದರ ಮೂಲ ಸ್ವರೂಪ ಬಿಟ್ಟು ದೂರ ಹೋಗುತ್ತಿದೆ ಎಂದು ವಿಷಾದಿಸಿದರು.

ಕನ್ನಡ ಉಪನ್ಯಾಸಕಿ, ಕವಯತ್ರಿ ವಸಂತಿ ಅಂಬಲಪಾಡಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಬಂಟರ ಸಂಘದ ಸಂಚಾಲಕ ಬಿ. ಜಯರಾಜ್ ಹೆಗ್ಡೆ, ಜಿಲ್ಲಾ ಮಹಿಳಾ ಮಂಡಳಿ ಒಕ್ಕೂಟ ಅಧ್ಯಕ್ಷೆ ಸರಳಾ ಕಾಂಚನ್, ಸಾಫಲ್ಯ ಟ್ರಸ್ಟ್ ಪ್ರವರ್ತಕಿ ನಿರುಪಮಾ ಪ್ರಸಾದ್ ಶೆಟ್ಟಿ, ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಅಧ್ಯಕ್ಷೆ ಶೀಲಾ ಶೆಟ್ಟಿ ಉಪಸ್ಥಿತರಿದ್ದರು.