ಕೋಟ: ಪಾಂಡೇಶ್ವರ ಪಂಚಾಯಿತಿ ಸಮೀಪ ಸರ್ಕಾರಿ ಸ್ಥಳದಲ್ಲಿ ಸರ್ಕಾರಿ ಕಟ್ಟಡದಲ್ಲಿ ಮಹಿಳಾ ಮಂಡಲದ ಕಚೇರಿಯಲ್ಲಿ ತರಬೇತಿ ಹೆಸರಿನಲ್ಲಿ ಕಾರ್ಖಾನೆ ಸ್ಥಾಪಿಸಿದ್ದ ತೆಂಗು ನಾರು ಮಂಡಳಿ ಹೋರಾಟಕ್ಕೆ ಮಣಿದು ಕಚೇರಿಯನ್ನು ಹಿಂದಿರುಗಿಸಿದೆ.
ಕಚೇರಿ ಸ್ಥಾಪನೆಗೆ ಎಂದು ಮಹಿಳಾ ಮಂಡಲ ತನ್ನ ಕಟ್ಟಡವನ್ನು ನಾರು ಮಂಡಳಿಗೆ ನೀಡಿತ್ತು. ಆದರೆ ಕ್ರಮೇಣ ಮಂಡಳಿಯವರು ತರಬೇತಿ ನೆಪದಲ್ಲಿ ಆ ಕಟ್ಟಡಲ್ಲಿ ಕಾರ್ಖಾನೆಯನ್ನೇ ಆರಂಭಿಸಿದ್ದರು. ಕಾರ್ಖಾನೆಯ ತ್ಯಾಜ್ಯ ನೀರು ರಸ್ತೆಗೆ ಹರಿದು ಸಮಸ್ಯೆಯಾಗುತ್ತು. ಈ ಹಿನ್ನೆಲೆಯಲ್ಲಿ ಕಟ್ಟಡ ಬಿಟ್ಟುಕೊಡುವಂತೆ ಮಹಿಳಾ ಮಂಡಲ, ಪಾಂಡೇಶ್ವರ ಗ್ರಾಮ ಪಂಚಾಯಿತಿ ಕೆಲ ಸದಸ್ಯರು ಹೋರಾಟಕ್ಕೆ ಧುಮುಕಿದ್ದರು. ಆದರೂ ಮಂಡಳಿ ಬಿಟ್ಟುಕೊಟ್ಟಿರಲಿಲ್ಲ. ಈ ಬಗ್ಗೆ ಕಳೆದ ಮಾರ್ಚ್‌ನಲ್ಲಿ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿ ಸಮಸ್ಯೆಯನ್ನು ತೆರೆದಿಟ್ಟಿತ್ತು. ಪ್ರಸ್ತುತ ನಾರು ಮಂಡಳಿ ಕಟ್ಟಡವನ್ನು ಬಿಟ್ಟುಕೊಟ್ಟಿದೆ. ಕಚೇರಿ ಸ್ಥಳವನ್ನು ಬುಧವಾರ ತೆರೆದು ಮಹಿಳಾ ಮಂಡಲದ ಪದಾಧಿಕಾರಿಗಳು ಸ್ವಚ್ಛಗೊಳಿಸಿ ಕಟ್ಟಡ ಅಭಿವೃದ್ಧಿಗೆ ನಿರ್ಧರಿಸಿದ್ದು, ಸ್ಥಳೀಯ ಜನಪ್ರತಿನಿಧಿಗಳು ಸಹಕಾರ ಪಡೆದು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ಮಹಿಳಾ ಮಂಡಲಿಗಿದೆ.
ಹಲವು ವರ್ಷಗಳಿಂದ ನಮ್ಮ ಕಚೇರಿ ಹಿಂತಿರುಗಿಸಲು ಕೋರಿಕೊಂಡಿದ್ದೇವೆ. ಆದರೆ ಅದಕ್ಕೆ ಸೊಪ್ಪು ಹಾಕದ ತೆಂಗಿನ ನಾರು ಮಂಡಳಿಯವರು ಅದರಲ್ಲೇ ಕಾರ್ಯಾಚರಣೆ ಮುಂದುವರಿಸಿದರು. ಇದರಿಂದ ನಮ್ಮ ಮಹಿಳಾ ಮಂಡಲ, ಪಂಚಾಯಿತಿ ಮೂಲಕ ಹೋರಾಕ್ಕೆ ಧುಮುಕಿದ್ದೆವು. ಆದರೂ ಮಂಡಳಿ ಮೀನಮೇಷ ಎಣಿಸುತ್ತಿತ್ತು. ವಿಜಯವಾಣಿ ಈ ಬಗ್ಗೆ ವಿಶೇಷ ವರದಿ ಪ್ರಕಟಿಸಿದ ಬಳಿಕ ನಾರು ಮಂಡಳಿ ಮೆತ್ತಗಾಗಿತ್ತು. ವಿಜಯವಾಣಿ ಸಹಕಾರಕ್ಕೆ ಕೃತಜ್ಞತೆಗಳು.
ಸುಮಿತ್ರಾ ಸುಧಾಕರ್, ಅಧ್ಯಕ್ಷರು ಮಹಿಳಾ ಮಂಡಲ ಪಾಂಡೇಶ್ವರ ಸಾಸ್ತಾನ