ಜಿಲ್ಲೆ

ಆಲೋಚನೆ ಜತೆಗೆ ಮೌಲ್ಯ ಬೆಳೆಸುವ ಕಾವ್ಯ: ರಂಗಕರ್ಮಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅಭಿಪ್ರಾಯ

reportermys

ಮಂಡ್ಯ: ಕಾವ್ಯ ಹೊಸ ಆಲೋಚನೆಗಳ ಜತೆಗೆ ಮೌಲ್ಯಗಳನ್ನು ಬೆಳೆಸುತ್ತದೆ ಎಂದು ರಂಗಕರ್ಮಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕನ್ನಿಕಶಿಲ್ಪ ನವೋದಯ ತರಬೇತಿ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಯುವ ಬರಹಗಾರರ ಬಳಗ, ಪರಿಚಯ ಪ್ರಕಾಶನ ಹಾಗೂ ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬದುಕಬೇಕಾದ ರೀತಿಯನ್ನು ಕಲಿಸುವ ಕವಿತೆಗಳ ಓದಿನಿಂದ ಜಗತ್ತೇ ನಾವಾಗುತ್ತವೆ ಎಂದರು.

ಕವಿತೆ ವಾಚ್ಯತೆಯಿಂದ ಕೂಡಿರಬಾರದು. ಅದು ಯಾವಾಗಲೂ ಧ್ವನಿಸುವ ಗುಣ ಹೊಂದಿರಬೇಕು. ಕವಿ ತನ್ನೊಳಗೆ ಧ್ವನಿಸುವ ನವಿರುತನ, ಪಿಸುನುಡಿ, ಬೆಂಕಿ, ಜ್ವಾಲೆ, ಪ್ರಶ್ನೆ, ಒಳತೋಟಿ, ಛಿದ್ರಗೊಂಡ ಮನಸ್ಥಿತಿಯನ್ನು ಸಶಕ್ತವಾಗಿ ಕಾವ್ಯ ಲಹರಿಯ ಮೂಲಕ ಅಭಿವ್ಯಕ್ತಪಡಿಸಬೇಕು. ಬದುಕಿನ ಹೊಸ ಹೊಸ ನೆಲೆಗಳನ್ನು ಕಾವ್ಯದ ಮುಖೇನ ಹುಡುಕಾಟ ನಡೆಸಿ, ದಕ್ಕಿದ ಅನುಭವಗಳನ್ನು ಕಾವ್ಯಕ್ಕಿಳಿಸಿದರೆ ಸಾಲದು, ಪದ ಪದದಲ್ಲೂ ಹೊಸ ಹೊಸ ಅರ್ಥವನ್ನು ಧ್ವನಿಸಬೇಕು ಎಂದು ವಿಶ್ಲೇಷಿಸಿದರು.

ಕವಿಗೋಷ್ಠಿ ಉದ್ಘಾಟಿಸಿದ ಕವಯತ್ರಿ ಸುಚಿತ್ರಾ ಹೆಗ್ಡೆ ಮಾತನಾಡಿ, ಕವಿಗಳು ಯಾವುದೇ ಪೂರ್ವಗ್ರಹಗಳಿಗೆ ಪೀಡಿತರಾಗದೆ ಪ್ರಚಲಿತ ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ ಬರೆಯಬೇಕು. ವ್ಯವಸ್ಥೆಯ ಓರೆಕೋರೆಗಳನ್ನು ತಿದ್ದಿ ತೀಡಿ ಸಮಾಜವನ್ನು ಸದಾ ಎಚ್ಚರದಲ್ಲಿಡಬೇಕು. ಕಾವ್ಯವು ಭಾಷೆಯ ಜತೆ ಹುಡುಕಾಟದ ಅನುಸಂಧಾನವಾಗಿದೆ. ಇದರಲ್ಲಿ ಶಕ್ತ ಭಾವ ಮತ್ತು ಧ್ವನಿ ತುಂಬಿರಬೇಕು. ಆದ್ದರಿಂದಲೇ ಭಾವನೆಗಳನ್ನು ಬರೀ ಮಾತುಗಳಲ್ಲಿ ಹಿಡಿದಿಡಲಾಗದು ಎಂದರು.

ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡಿದರು. ಸಿಐಟಿಯು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಪರಿಚಯ ಪ್ರಕಾಶನದ ಸಂಸ್ಥಾಪಕ ಎಂ.ಎನ್.ಶಿವಕುಮಾರ್‌ಆರಾಧ್ಯ, ಕೇಂದ್ರದ ಪ್ರಾಂಶುಪಾಲೆ ಎಚ್.ಆರ್.ಕನ್ನಿಕಾ, ಕೆ.ಪಿ.ಅರುಣಕುಮಾರಿ ಇತರರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು. ಜಿಲ್ಲೆಯ 30 ಪ್ರತಿಭಾವಂತ ಕವಯತ್ರಿಯರು ತಮ್ಮ ಸ್ವರಚಿತ ಕವನ ವಾಚಿಸಿದರು.