ಮುದ್ದೇಬಿಹಾಳ: ತೀವ್ರ ಕುತೂಹಲ ಕೆರಳಿಸಿದ್ದ ಪಟ್ಟಣದ ಪುರಸಭೆಯ 10ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ಪಕ್ಷದ ವಶವಾಗಿದೆ.
21ನೇ ವಾರ್ಡ್ ಸದಸ್ಯ ಮಹಿಬೂಬ ಗೊಳಸಂಗಿ ಅಧ್ಯಕ್ಷರಾಗಿ, 6ನೇ ವಾರ್ಡ್ ಸದಸ್ಯೆ ಪ್ರೀತಿ ದೇಗಿನಾಳ ಉಪಾಧ್ಯಕ್ಷರಾಗಿ ಬುಧವಾರ ಪುರಸಭೆ ಸಭಾಭವನದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 16 ಮತಗಳ ಬಹುಮತದೊಂದಿಗೆ ಆಯ್ಕೆಯಾದರು.
ಕಾಂಗ್ರೆಸ್ 8, ಬಿಜೆಪಿ 8, ಪಕ್ಷೇತರರು 5, ಜೆಡಿಎಸ್‌ನ 2 ಚುನಾಯಿತ ಸದಸ್ಯರು ಹಾಗೂ ಸ್ಥಳೀಯ ಶಾಸಕ ಸಿ.ಎಸ್.ನಾಡಗೌಡ ಸೇರಿ 24 ಮತಗಳು ಇದ್ದವು. ಸಭೆಯಲ್ಲಿ ಶಾಸಕರು, ಕಾಂಗ್ರೆಸ್‌ನ 8, ಪಕ್ಷೇತರ 5, ಜೆಡಿಎಸ್‌ನ 2 ಸೇರಿ 16 ಜನರು ಗೊಳಸಂಗಿ, ದೇಗಿನಾಳ ಪರ ಕೈಎತ್ತಿ ಬೆಂಬಲ ಸೂಚಿಸಿದರು. ಬಿಜೆಪಿಯ 8 ಸದಸ್ಯರು ಪುರಸಭೆಯಲ್ಲಿದ್ದರೂ ಸಭೆಗೆ ಹಾಜರಾಗದೆ ಗೈರುಳಿದರು.
ಚುನಾವಣಾಧಿಕಾರಿ- ತಹಸೀಲ್ದಾರ್ ಬಲರಾಮ ಕಟ್ಟಿಮನಿ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಮಹಿಬೂಬ ಗೊಳಸಂಗಿ, ರಿಯಾಜ್‌ಅಹ್ಮದ್ ಢವಳಗಿ, ಬಿಜೆಪಿಯ ಬಸವರಾಜ ಮುರಾಳ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಪ್ರೀತಿ ದೇಗಿನಾಳ, ಭಾರತಿ ಪಾಟೀಲ, ಬಿಜೆಪಿಯ ಸಹನಾ ಬಡಿಗೇರ ನಾಮಪತ್ರ ಸಲ್ಲಿಸಿದ್ದರು. ಮುರಾಳ, ಪಾಟೀಲ ನಾಮಪತ್ರ ಹಿಂತೆಗೆದುಕೊಂಡಿದ್ದರು. 23 ಚುನಾಯಿತ ಸದಸ್ಯರ ಪೈಕಿ 15 ಸದಸ್ಯರು ಹಾಜರಿದ್ದುದರಿಂದ ಕೋರಂ ಭರ್ತಿಯಾಗಿ ನಿಯಮದಂತೆ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು ಎಂದು ತಿಳಿಸಿದರು.
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಢವಳಗಿ ಅವರು ನಾಮಪತ್ರ ಹಿಂತೆಗೆದುಕೊಳ್ಳಲು ಸಮಯಾವಕಾಶ ಮೀರಿದ್ದರಿಂದ ಕಣದಲ್ಲಿ ಉಳಿದುಕೊಂಡರು. ಏತನ್ಮಧ್ಯೆ ಕಾಂಗ್ರೆಸ್ ಮುಖಂಡರು ರಿಯಾಜ್‌ಅಹ್ಮದ್ ಅವರನ್ನು ಶಾಸಕ ನಾಡಗೌಡರ ಹತ್ತಿರ ಕರೆದೊಯ್ದು ಮನವೊಲಿಸಿದ್ದರಿಂದ ಮತದಾನ ನಡೆದಾಗ ಢವಳಗಿಯವರೂ ಸಹಿತ ಗೊಳಸಂಗಿ ಪರ ಕೈಎತ್ತಿ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು. ಢವಳಗಿ ಅವರು ನಾಮಪತ್ರ ಹಿಂತೆಗೆದುಕೊಂಡಿದ್ದರೆ ಗೊಳಸಂಗಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು.
ವಿಜಯೋತ್ಸವದಲ್ಲಿ ಶಾಸಕ ನಾಡಗೌಡರು, ಮಹಿಬೂಬ ಗೊಳಸಂಗಿ, ಪ್ರೀತಿ ದೇಗಿನಾಳ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಚುನಾವಣೆ ಪ್ರಕ್ರಿಯೆಗೆ ಸಹಕರಿಸಿದರು. ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸ್‌ಐಗಳಾದ ಸಂಜಯ್ ತಿಪ್ಪರಡ್ಡಿ, ಆರ್.ಎಲ್.ಮನ್ನಾಭಾಯಿ, ಪೊಲೀಸ್ ಸಿಬ್ಬಂದಿ ಪುರಸಭೆ ಎದುರು ಬ್ಯಾರಿಕೇಡ್ ಅಳವಡಿಸಿ ಬಿಗಿಭದ್ರತೆ ಒದಗಿಸಿದ್ದರು.
ಅಭಿನಂದಿಸಿದ ಮುಖಂಡ ಸಿ.ಬಿ.ಅಸ್ಕಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಅವರು, ಗೊಳಸಂಗಿ ಅವರು ನಮ್ಮ ಆತ್ಮೀಯ ಬಳಗದಲ್ಲಿ ಒಬ್ಬರಾಗಿದ್ದಾರೆ. ನಮ್ಮ ಶಾಸಕರು ಅವರ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರಾಗಿ ಆಯ್ಕೆಯಾಗುವಂತೆ ನೋಡಿಕೊಂಡಿದ್ದಾರೆ. ಇದರ ಹಿಂದೆ ನಮ್ಮ ಬಳಗದವರ ಪರಿಶ್ರಮವೂ ಅಪಾರವಾಗಿದೆ. ಮುಂಬರುವ ದಿನಗಳಲ್ಲಿ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವಲ್ಲಿ ಶಾಸಕರು ಶ್ರಮಿಸುವದಾಗಿ ತಿಳಿಸಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಬೆಂಬಲ ನೀಡಿ ಗೊಳಸಂಗಿ ಅವರು ಉತ್ತಮ ಆಡಳಿತ ಕೊಡಲು ನೆರವಾಗುತ್ತೇವೆ. ಪಟ್ಟಣದ ಅಭಿವೃದ್ಧಿಗೆ ನಮ್ಮ ಬಳಗವೂ ಸಂಪೂರ್ಣ ಸಹಕಾರ ನೀಡಲು ಸದಾ ಸಿದ್ಧವಾಗಿದೆ ಎಂದರು.