ಜಿಲ್ಲೆ

ಉಸ್ತುವಾರಿ ಸಚಿವರ ವಿರುದ್ಧ ಟೀಕೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಜಿಲ್ಲೆಗೆ ಬರುವ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡದೆ ಅಥವಾ ಯೋಜನೆಗಳನ್ನು ಹಾಕಿಕೊಳ್ಳದೆ ಕೇವಲ ತಮ್ಮ ನಾಯಕರು ಮತ್ತು ಕಾರ್ಯಕರ್ತರನ್ನು ಮೆಚ್ಚಿಸುವ ಸಲುವಾಗಿ ನೀಡುತ್ತಿರುವ ಹೇಳಿಕೆಗಳನ್ನು ಜಿಲ್ಲಾ ಬಿಜೆಪಿ ಗಮನಿಸುತ್ತಿದ್ದು ಮುಂದೆ ಈ ರೀತಿಯ ಅಸಂಬದ್ಧ ಹೇಳಿಕೆಗಳನ್ನು ನಿಲ್ಲಿಸುವಂತೆ ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ ಅಗ್ರಹಿಸಿದ್ದಾರೆ. ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ನೇರವಾಗಿವಾಗಿ ಚುನಾವಣೆ ಎದುರಿಸದೆ ಹಿಂಬಾಗಿಲಿನಿಂದ ಮಂತ್ರಿಯಾಗಿರುವ ಕೊಡಗು ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜ್ ಅವರಿಂದ ಜಗ ಮೆಚ್ಚಿದ ನಾಯಕ ಪ್ರಧಾನಿ ಮೋದಿ ಯವರಿಗೆ ಸರ್ಟಿಫಿಕೇಟ್ ಅಗತ್ಯವಿಲ್ಲ. ನಿಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದಕ್ಕೆ ನಿಮ್ಮ ಸ್ವಂತ ಜಿಲ್ಲೆಯಲ್ಲೇ ವ್ಯಾಪಕ ವಿರೋಧ ವ್ಯಕ್ತವಾಗುತಿರುವುದನ್ನು ಸರಿಪಡಿಸಲಾಗದ ನೀವು ಬಿಜೆಪಿ ಬಗ್ಗೆ, ಪ್ರಧಾನಿ ಮೋದಿ ಬಗ್ಗೆ ಮಾತನಾಡುವಾಗ ಸ್ವಲ್ಪ ಯೋಚಿಸಿ ಮಾತನಾಡಿ ಎಂದಿದ್ದಾರೆ.
ಭೋಸರಾಜ್ ಹಿರಿಯರಿದ್ದರೂ ರಾಜಕೀಯ ಅನುಭವವಿಲ್ಲ. ಜನರಿಂದ ನೇರ ಚುನಾವಣೆ ಎದುರಿಸಿ ಆಯ್ಕೆಯಾಗದ ಹಿಂಬಾಗಿಲ ರಾಜಕಾರಣಿ ಭೋಸರಾಜ್ ಅವರಿಗೆ ಜನರ ನಾಡಿ ಮಿಡಿತದ ಅರಿವಿಲ್ಲ. ಜನರಿಗೆ ಆಮಿಷ ನೀಡಿ ಬಿಟ್ಟಿ ಭಾಗ್ಯಗಳ ಹೆಸರಿನಲ್ಲಿ ಗೆದ್ದು ಏನೇನೋ ಮಾತನಾಡುತ್ತಿದ್ದಾರೆ. ಜನರ ಮೇಲೆ ತೆರಿಗೆ ಹೊರೆ, ಬೆಲೆ ಹೆಚ್ಚಳದ ಹೊರೆ ಹೇರಲಾಗುತ್ತಿದೆ. ಎದುರುಗಡೆಯಿಂದ ಕೊಟ್ಟು ಹಿಂಬದಿಯಿಂದ ಕಿತ್ತುಕೊಳ್ಳಲಾಗುತ್ತಿದೆ. ಮುಂದಿನ ಒಂದೇ ವರ್ಷದಲ್ಲಿ ಜನರಿಗೆ ವಾಸ್ತವ ಅರಿವಾಗಲಿದೆ ಎಂದಿದ್ದಾರೆ.