ಹುಬ್ಬಳ್ಳಿ: ಪ್ರಧಾನ ಮಂತ್ರಿಯವರು ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ರೂಪಿಸಿದ 15 ಅಂಶಗಳ ಕಾರ್ಯಕ್ರಮ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಭಾರತ ಸರ್ಕಾರದ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯ ನಿರ್ದೇಶನದಂತೆ ಕರ್ನಾಟಕ ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದ್ದು, ಅದರಲ್ಲಿ ಮಹೇಂದ್ರ ಸಿಂಘಿ ಅವರು ಸ್ಥಾನ ಪಡೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ, ಸಮಾಜ ಸೇವಕ ಹಾಗೂ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಶನ್ ಮಹಾವೀರ ಲಿಂಬ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಅವರನ್ನು ಸಮಿತಿಯ ಸದಸ್ಯರಾಗಿ ನೇಮಿಸಲಾಗಿದೆ.
ಸಮಾಜ ಸೇವೆ, ಸಂಘಟನೆ ಹಾಗೂ ಆಡಳಿತಾತ್ಮಕ ಅನುಭವವನ್ನು ಪರಿಗಣಿಸಿ ಸರ್ಕಾರವು ಅವರಿಗೆ ಈ ಹೊಣೆಗಾರಿಕೆ ವಹಿಸಿದೆ. ಈ ಸಮಿತಿಯನ್ನು ಮೂರು ವರ್ಷದ ಅವಧಿಗೆ ರಚಿಸಲಾಗಿದೆ.
ಸಮಿತಿಯ ಸಭೆಯನ್ನು ಪ್ರತಿ ತ್ರೈಮಾಸಿಕದಲ್ಲಿ ಒಮ್ಮೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತದೆ.
ಸಭೆಯಲ್ಲಿ 15 ಅಂಶಗಳ ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಪ್ರಗತಿ ಪರಿಶೀಲಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.