ಜಿಲ್ಲೆ

ಕಕ್ಷಿದಾರರ ಅಲೆದಾಟ ತಪ್ಪಿಸುವುದು ನಮ್ಮ ಕರ್ತವ್ಯ

ಹೊನ್ನಾಳಿ: ಲೋಕ ಅದಾಲತ್ ಕಾರ್ಯಕ್ರಮಗಳ ಮೂಲಕ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿ ಕಕ್ಷಿದಾರರು ಅನಗತ್ಯವಾಗಿ ನ್ಯಾಯಾಲಯಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಅವರು ನೆಮ್ಮದಿಯ ಜೀವನ ನಡೆಸುವಂತೆ ಮಾಡುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶ ಮಹಾವೀರ ಕರೆಣ್ಣನವರ್ ಹೇಳಿದರು.

ಪಟ್ಟಣದ ನ್ಯಾಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜುಲೈ 12 ರ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕಾರ್ಯಕ್ರಮಗಳು ಸಂಪೂರ್ಣ ಯಶಸ್ವಿಯಾಗಬೇಕೆಂದರೆ ವಕೀಲರು ಹಾಗೂ ಪೊಲೀಸ್ ಅಧಿಕಾರಿಗಳ ಸಹಕಾರ ಅತ್ಯಗತ್ಯ. ಜನರಿಗೆ ತಮ್ಮ ಸಮಸ್ಯೆಗಳನ್ನು ಲೋಕ ಅದಾಲತ್ ಕಾರ್ಯಕ್ರಮಗಳಲ್ಲಿ ಪರಸ್ಪರ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವ ಕುರಿತು ತಿಳಿವಳಿಕೆ ನೀಡಬೇಕಾಗಿದೆ ಎಂದರು.

ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಶಿವಪ್ಪ ಗಂಗಪ್ಪ ಸಲಗರೆ ಮಾತನಾಡಿ, ನ್ಯಾಯ ಪ್ರಕರಣಗಳನ್ನು ರಾಜಿ ಸಂಧಾನಗಳ ಮೂಲಕ ಬಗೆ ಹರಿಸುವುದು ಉತ್ತಮ ಸಮಾಜ ನಿರ್ವಣಕ್ಕೆ ತುಂಬ ಸಹಕಾರಿಯಾಗಿದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಪಿ. ಜಯಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ನ್ಯಾಯಾಲಯಗಳ ಸಂಖ್ಯೆ ಹಾಗೂ ನ್ಯಾಯಾಲಯಗಳಿಗೆ ಹೋಗುವ ಜನರ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿ ಎಲ್ಲವೂ ಹೆಚ್ಚಾಗಿದೆ ಎಂದರು.

ಸಭೆಯಲ್ಲಿ ಹೊನ್ನಾಳಿ, ಹರಿಹರ ಹಿರಿಯ ಸಿವಿಲ್ ನ್ಯಾಯಾಧೀಶೆ ಪದ್ಮಶ್ರೀ ಮುನೋಳಿ, ಹೊನ್ನಾಳಿ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್. ದೇವದಾಸ್, ಹೆಚ್ಚುವರಿ ನ್ಯಾಯಾಧೀಶ ಪುಣ್ಯಕೋಟಿ, ಸಹಾಯಕ ಸರ್ಕಾರಿ ಅಭಿಯೋಜಕ ಭರತ್ ಭೀಮಯ್ಯ, ಸ್ವಪ್ನ, ನ್ಯಾಮತಿ ಸಿಪಿಐ ರವಿ, ಹೊನ್ನಾಳಿ ಪಿಎಸ್​ಐ ಕುಮಾರ್, ತಾಪಂ ಇಒ ಪ್ರಕಾಶ್ ಸೇರಿ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು, ಸಹಕಾರಿ ಸಂಘ ಸಂಸ್ಥೆಗಳ ಅಧಿಕಾರಿಗಳು, ಕಕ್ಷಿದಾರರು ಇದ್ದರು.

ಪೂರ್ವಭಾವಿ ಸಭೆಯ ನಂತರ ನ್ಯಾಯಾಧೀಶರು ಕೆಲ ಕಾಲ ಪೊಲೀಸ್, ಸರ್ಕಾರಿ ಅಧಿಕಾರಿಗಳ ಸಭೆ ನಡೆಸಿದರು.