ಮಂಡ್ಯ: ಭಗವಾನ್ ಮಹಾವೀರರ ಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನ ಸಾರ್ಥಕತೆಯನ್ನು ಪಡೆಯಬೇಕು ಎಂದು ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ಸಲಹೆ ನೀಡಿದರು.
ನಗರದ ಮಹಾವೀರ ಭವನದಲ್ಲಿ ಭಗವಾನ್ 1008 ಶ್ರೀ ಅನಂತನಾಥಸ್ವಾಮಿ ದಿಗಂಬರ ಜೈನ ಬಸದಿ ವತಿಯಿಂದ ಆಯೋಜಿಸಿದ್ದ ಮಹಾವೀರ ಜಯಂತ್ಯುತ್ಸವಲ್ಲಿ ಮಾತನಾಡಿದ ಅವರು, ಭಗವಾನ್ ಮಹಾವೀರರ ಬದುಕು ಮತ್ತೊಬ್ಬರಿಗೆ ಮಾದರಿ. ಸಾವಿರಾದ ವರ್ಷಗಳ ಹಿಂದೆ ಭಗವಾನ್ ಮಹಾವೀರರು ಜನ್ಮತಳೆದರು. ಅಂದು ಭಾರತೀಯ ಸಂಸ್ಕೃತಿಗೆ ಒಂದು ದೊಡ್ಡ ವರದಾನ ಎನ್ನಬಹುದು. ಅವರು ಹುಟ್ಟಿದ ಯುಗದಲ್ಲಿ ಈ ಭೂಮಿಯ ಮೇಲೆ ಹಿಂಸೆ, ಅನಾಚಾರ, ಇತ್ಯಾದಿಗಳಿಂದ ಅಂಧಕಾರ ತುಂಬಿತ್ತು. ಮಾನವತೆಯ ಅಂತ್ಯವಾಗುತ್ತಿತ್ತು. ಆಗ ಭಗವಾನ್ ಮಹಾವೀರರು ಮಾನವನ ಕಲ್ಯಾಣಕ್ಕಾಗಿ ತಮ್ಮ ಆತ್ಮಸಾಧನೆಯಿಂದ ಏನನ್ನು ಅರಿಯುತ್ತಿದ್ದರೋ, ಅದನ್ನು ಪ್ರಜೆಗಳಿಗೆ ತತ್ವಗಳ ಮೂಲಕ ನೀಡುತ್ತಿದ್ದರು. ಅವರನ್ನು ಜೈನಧರ್ಮವನ್ನು ಉದ್ದೀಪನಗೊಳಿಸಿದ ಮಹಾನ್ ಪುರುಷ ಎನ್ನಬಹುದಾಗಿದೆ ಎಂದರು.
ಭಗವಾನ್ ಮಹಾವೀರರ ಬೋಧನೆಗಳಲ್ಲಿ ಅಹಿಂಸೆ ಪ್ರಮುಖವಾದದ್ದು. ಬದುಕಿ ಬದುಕಲು ಬಿಡಿ ಎಂಬುದು ಅವರ ಮುಖ್ಯ ಸಂದೇಶವಾಗಿತ್ತು. ಈ ವಿಶ್ವದಲ್ಲಿರುವ ಎಲ್ಲ ಜೀವಿಗಳನ್ನೂ ನಿನ್ನ ಆತ್ಮನ ಸಮಾನವಾಗಿ ನೋಡು, ನಿನಗೆ ಹೇಗೆ ಬದುಕಬೇಕು, ಸುಖವಾಗಿರಬೇಕು ಎನ್ನುವ ಭಾವನೆ ಇರುತ್ತದೆಯೋ ಹಾಗೆಯೇ ಎಲ್ಲ ಜೀವಿಗಳಿಗೂ ಬದುಕಬೇಕು, ಸುಖವಾಗಿರಬೇಕು ಎಂಬ ಭಾವನೆಯಿರುತ್ತದೆ. ಅದಕ್ಕಾಗಿ ಯಾವ ಜೀವಿಯನ್ನೂ ಹಿಂಸಿಸುವ ಅಧಿಕಾರ ನಮಗಿಲ್ಲವೆಂದು ಬೋಧಿಸಿದರು. ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರರ ಜಯಂತಿಯನ್ನು ಆಚರಿಸುವ ಮೂಲಕ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಜಗತ್ತಿನಲ್ಲಿ ಶಾಂತಿ ಲಭಿಸುವಂತೆ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಜೈನ ಸಮಾಜದ ಅಧ್ಯಕ್ಷ ಶಾಂತಿ ಪ್ರಸಾದ್, ಉಪಾಧ್ಯಕ್ಷ ರಾಕೇಶ್, ಕಾರ್ಯದರ್ಶಿ ರವಿ, ಪದ್ಮನಾಭ, ಜಯಂತಿ ಬಾಹುಬಲಿ, ಸುಜಾತಾ ನಾಗೇಶ್ ಇತರರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅನಂತನಾಥನಾಥ ಜೈನ ಬಸದಿಯಿಂದ ಮಹಾವೀರ ವೃತ್ತ, ಅಶೋಕನಗರ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಮಹಾವೀರ ಮೂರ್ತಿ ಮೆರವಣಿಗೆ ನಡೆಯಿತು.
ಇತ್ತ ಥೇರಾಪಂತ್ ಜೈನ ಸಮಾಜದ ವತಿಯಿಂದಲೂ ಭಗವಾನ್ ಮಹಾವೀರರ ಜಯಂತಿ ಆಚರಿಸಲಾಯಿತು. ಶ್ವೇತಾಂಬರ ಜೈನ ದೇವಾಲಯದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮಹಾವೀರರ ಮೂರ್ತಿ ಮೆರವಣಿಗೆ ನಡೆಯಿತು. ಥೇರಾಪಂತ್ ಸಮಾಜದ ಅಧ್ಯಕ್ಷ ಸುಜನ್‌ರಾಜ್‌ಬನ್ಸಾಲಿ, ಪುಟರ್‌ಮಲ್, ಭರತ್‌ಜೈನ್ ಇತರರಿದ್ದರು.