ತೆಲಸಂಗ ಗ್ರಾಮದಲ್ಲಿ ಸಾವಿತ್ರಿಬಾಯಿ ಫುಲೆ ಭಾವಚಿತ್ರದ ಮೆರವಣಿಗೆಗೆ ವೀರೇಶ್ವರ ದೇವರು ಚಾಲನೆ ನೀಡಿದರು. ಸಾಹಿತಿ ಡಾ.ವಿ.ಎಸ್.ಮಾಳಿ, ಸಿಪಿಐ ಸುನೀಲ ಪಾಟೀಲ, ಈರಣ್ಣ ಕುಮಠಳ್ಳಿ, ಬಸು ಬುಟಾಳೆ, ಅರವಿಂದ ಇತರರು ಇದ್ದರು. 
ಜಿಲ್ಲೆ

ಮಹಾತ್ಮರ ಜಯಂತ್ಯುತ್ಸವ ಅರ್ಥಬದ್ಧವಾಗಿರಲಿ

ತೆಲಸಂಗ: ಸಮಾಜಕ್ಕಾಗಿ ಜೀವ ಸವೆಸಿದ ಮಹಾತ್ಮರ ಜಯಂತಿ ಆಚರಣೆ ಅರ್ಥಬದ್ಧವಾಗಿರಲಿ. ಮಹಾತ್ಮರ ಹೆಸರಲ್ಲಿ ಕುಡಿದು, ಕುಣಿದು ಹಾಗೂ ರ‌್ಯಾಲಿ ಮಾಡಿ ಸಮಾಜದ ಸ್ವಾಸ್ಥ್ಯ ಹಾಳುಮಾಡಬೇಡಿ. ಸನ್ಮಾನ ಮಾಡಲಾಗದಿದ್ದರೂ ಚಿಂತೆಯಿಲ್ಲ, ಅಪಮಾನ ಮಾಡಬೇಡಿ ಎಂದು ಸಾಹಿತಿ ಡಾ. ವಿ.ಎಸ್.ಮಾಳಿ ಹೇಳಿದ್ದಾರೆ.

ಗ್ರಾಮದ ಮುಖ್ಯ ಬಜಾರ್‌ನಲ್ಲಿ ಇತ್ತೀಚೆಗೆ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ನಿಮಿತ್ತ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಸಾವಿತ್ರಿಬಾಯಿ ಫುಲೆ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಮಹಿಳೆಯರ ಶೋಷಣೆಯನ್ನು ತಡೆದು ಶಿಕ್ಷಣವನ್ನು ಧಾರೆ ಎರೆದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಕಾರ್ಯ ಪ್ರತಿಯೊಬ್ಬರ ಜೀವನಕ್ಕೆ ಆದರ್ಶವಾಗಿದೆ ಎಂದರು.

ಹಿರೇಮಠದ ವೀರೇಶ್ವರ ದೇವರು ಮಾತನಾಡಿ, ಸಕಲ ಮಾನವ ಕುಲದ ಉದ್ಧಾರಕ್ಕಾಗಿ ಶ್ರಮಿಸಿದವರು. ಜಾತಿ, ಮತವನ್ನು ಮೀರಿ, ಬಿದ್ದವರ ಧ್ವನಿಯಾಗಿದ್ದವರನ್ನು ಜಾತಿಗೆ ಸೀಮಿತಗೊಳಿಸಿದರೆ ಅಂತಹ ಮಹನೀಯರ ವಿಚಾರಗಳಿಗೆ ಅಪಮಾನ ಮಾಡಿದಂತಾಗುತ್ತದೆ ಎಂದರು. ಖಾನಾಪುರ ಠಾಣೆ ಸಿಪಿಐ ಸುನೀಲ ಪಾಟೀಲ ಮಾತನಾಡಿ, ಕಲಿಸಿದ ಗುರುಗಳು, ಹೆತ್ತವರು ಹಾಗೂ ಜನಿಸಿದ ಊರನ್ನು ಯಾವತ್ತೂ ಮರೆಯಬಾರದು. ಶಿಕ್ಷಣ ಬದುಕಿಗೆ ದಾರಿ ತೋರುತ್ತದೆ. ಅವಕಾಶಗಳಿಲ್ಲದ ಕಾಲದಲ್ಲಿ ಅಕ್ಷರ ಕಲಿಸಿದ ಸಾವಿತ್ರಿಬಾಯಿ ಫುಲೆ ಇತಿಹಾಸದ ಪುಟ ಸೇರಿ ಮಹಾತ್ಮರಾಗಿದ್ದಾರೆ ಎಂದರು.

ಜೈಲು ಅಧಿಕಾರಿ ಗೀತಾ ಮಾಲಗಾವಿ ಮಾತನಾಡಿ, ಸಾಧನೆಯ ಹಾದಿಯಲ್ಲಿ ಸೋಲುಗಳು ಬರಬಹುದು. ಸೋಲುಗಳನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿಸಿಕೊಂಡು ಮುಂದೆ ನಡೆಯುವುದೇ ಸಾಧನೆಯ ಬಹುದೊಡ್ಡ ಮಾರ್ಗ ಎನ್ನುವುದನ್ನು ಸಾವಿತ್ರಿಬಾಯಿ ಫುಲೆ ಅವರ ಜೀವನದಿಂದ ಅರ್ಥವಾಗುತ್ತದೆ ಎಂದರು.

ಕೆಎಎಸ್ ಪರೀಕ್ಷೆ ಉತ್ತೀರ್ಣರಾದ ಜಗದೀಶ ಅಡಹಳ್ಳಿ, ಗಿರೀಶ ತಳಕಟ್ಟಿ ಮಾತನಾಡಿ, ಯಾವ ವ್ಯಕ್ತಿಯೂ ಒಮ್ಮೆಲೇ ದೊಡ್ಡವನಾಗಲಾರನು. ಜೀವನದ ಏಳಿಗೆಗೆ ತ್ಯಾಗ, ಪರಿಶ್ರಮ ಅತ್ಯವಶ್ಯವಾಗಿದೆ. ಸಾವಿತ್ರಿಬಾಯಿ ಫುಲೆಯವರು ಅಪಮಾನಗಳನ್ನು ಸಹಿಸಿಕೊಂಡು ಮಾನವ ಕುಲಕ್ಕೆ ಶಕ್ತಿ ತುಂಬಿದ ದಿಟ್ಟ ಮಹಿಳೆಯಾಗಿದ್ದಾರೆ. ಅಂತಹವರ ಜೀವನ ಇಂದಿನ ಯುವ ಜನರಿಗೆ ಮಾದರಿಯಾಗಿದೆ ಎಂದರು. ಈರಣ್ಣ ಕುಮಠಳ್ಳಿ, ಬಸು ಬುಟಾಳೆ, ಅರವಿಂದ ಉಂಡೋಡಿ ಇತರರು ಇದ್ದರು. 24 ಜನ ನಿವೃತ್ತ ಶಿಕ್ಷಕರನ್ನು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಗ್ರಾಮದ ಪ್ರಮುಖ ರಸ್ತೆಯ ಮೂಲಕ ಸಾವಿತ್ರಿಬಾಯಿ ಫುಲೆ ಭಾವಚಿತ್ರದ ಮೆರವಣಿಗೆ ನಡೆಯಿತು. ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು.