ಜಿಲ್ಲೆ

ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭ

ಉಡುಪಿ: ವ್ಯಕ್ತಿ ಸುಶಿತನಾದರೆ ಎಲ್ಲೆಡೆಯೂ ಗೌರವಕ್ಕೆ ಲಭಿಸುತ್ತದೆ. ಪ್ರತಿಯೊಬ್ಬರ ಬದುಕಿನಲ್ಲೂ ವಿದ್ಯೆ ಅಮೃತಪ್ರದವಾಗಿದ್ದು, ವಿದ್ಯಾದಾನ ಅಮೃತದಾನಕ್ಕೆ ಸಮಾನವಾಗಿದೆ ಎಂದು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.

ಶುಕ್ರವಾರ ಮುದ್ದಣ ಮಂಟಪದಲ್ಲಿ ಮಹಾತ್ಮ ಗಾಂಧಿ ಮೆಮೋರಿಯಲ್​ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು. ವಾಯು ದೇವರಿಗೆ ಅಮೃತ ಎಂಬ ಹೆಸರಿದೆ. ಅವರ ಅವತಾರವಾದ ಮಧ್ವಾಚಾರ್ಯರು ಮತ್ತು ಭಾವೀ ಸಮೀರ ವಾದಿರಾಜರು ನಡೆದಾಡಿದ ತುಳುನಾಡಿನಲ್ಲಿ ಎಂಜಿಎಂ ಕಾಲೇಜು ಅಮೃತ ಮಹೋತ್ಸವ ಆಚರಿಸುತ್ತಿರುವುದು ಸಂತೋಷದ ವಿಚಾರ. ಕಾಲೇಜು ಗುಣಮಟ್ಟದದ ಶಿಕ್ಷಣ ನೀಡುವ ಸಂಸ್ಥೆಯಾಗಿ ಬೆಳೆಯಲು ಡಾ. ಟಿಎಂಎ ಪೈ ಕರ್ತೃತ್ವ ಶಕ್ತಿ ಕಾರಣವಾಗಿದೆ ಎಂದು ಹೇಳಿದರು.

ಎಂಜಿಎಂ ಕಾಲೇಜು ಟ್ರಸ್ಟ್​ ಅಧ್ಯಕ್ಷ ಟಿ.ಸತೀಶ್​ ಯು. ಪೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಮಾಹೆ ಸಹ ಕುಲಾಧಿಪತಿ ಡಾ. ಎಚ್​.ಎಸ್​.ಬಲ್ಲಾಳ್​ ಮಾತನಾಡಿ, ಎಂಜಿಎಂ ಅಮೃತ ಮಹೋತ್ಸವ ಆಚರಿಸುತ್ತಿರುವುದು ಮಣಿಪಾಲ ಸಮೂಹ ಸಂಸ್ಥೆಗಳ ಚರಿತ್ರೆಯಲ್ಲಿ ಮಹತ್ವದ ಮೈಲುಗಲ್ಲು. ಪ್ರಸ್ತುತ ಕಾಲಟ್ಟದಲ್ಲಿ ಪದವಿ ಪಡೆದವರಲ್ಲಿ ಶೇ. 20ರಷ್ಟು ಮಂದಿಗೆ ಮಾತ್ರ ಉದ್ಯೋಗ ದೊರೆಯುತ್ತಿದ್ದು, ಇಂಡಸ್ಟ್ರೀ ಮತ್ತು ಅಕಾಡೆಮಿ ನಡುವಿನ ಅಂತರವನ್ನು ಕಡಿಮೆಗೊಳಿಸಿ, ವಿದ್ಯಾರ್ಥಿಗಳಲ್ಲಿ ಉದ್ಯೋಗಕ್ಕೆ ಬೇಕಾದ ಕೌಶಲ್ಯವನ್ನು ಬೆಳೆಸುವುದು ಅತೀ ಅಗತ್ಯ ಎಂದರು.

ಪೋಸ್ಟಲ್​ ಕವರ್​ ಬಿಡುಗಡೆ

ಕಾಲೇಜಿನ ಅಮೃತ ಮಹೋತ್ಸವ ಪ್ರಯುಕ್ತ ಉಡುಪಿ ಅಂಚೆ ಕಚೇರಿ ಅಧೀಕ್ಷಕ ರಮೇಶ್​ ಪ್ರಭು ಕಾಲೇಜಿನ ಅಮೃತ ಮಹೋತ್ಸವದ ಪ್ರಯುಕ್ತ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿದರು.

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್​ ಜನರಲ್​ ಡಾ.ಎಂ.ಡಿ. ವೆಂಕಟೇಶ್​, ಮಾಹೆಯ ಸಹ ಉಪಕುಲಪತಿ ಡಾ.ನಾರಾಯಣ ಸಭಾಹಿತ್​, ಡಾ.ಟಿ.ಎಂ.ಎ ಫೌಂಡೇಶನ್​ನ ಅಧ್ಯಕ್ಷ ಟಿ.ಅಶೋಕ್​ ಪೈ, ಎಂಜಿಎಂ ಕಾಲೇಜು ವಿಶ್ವಸ್ಥ ಮಂಡಳಿಯ ಟ್ರಸ್ಟಿ ವಸಂತಿ ಆರ್​.ಪೈ, ಸದಸ್ಯರಾದ ಕುಸುಮಾ ಪಾಂಡುರಂಗ ಪೈ, ನಾರಾಯಣ ಪೈ, ಅಕಾಡೆಮಿಯ ಕಾರ್ಯದರ್ಶಿ ಸಿಎ ಬಿ.ಪಿ. ವರದರಾಯ ಪೈ, ಕೌಶಲ್ಯ ಕೇಂದ್ರ ಮುಖ್ಯಸ್ಥ ಟಿ. ರಂಗ ಪೈ,. ಪಪೂ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಟಿ.ಎಂ.ಎ. ಪೈಗಳ ಕುಟುಂಬ ವರ್ಗ, ನಿವೃತ್ತ ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಎಂಜಿಎಂ ಪದವಿ ಕಾಲೇಜಿನ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಸ್ವಾಗತಿಸಿ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್​ ಎಸ್​ ನಾಯ್ಕ ವಂದಿಸಿದರು.ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಅಶ್ವಿನಿ ಸಿ. ಆಚಾರ್ಯ ಮತ್ತು ಸಂಸತ ವಿಭಾಗದ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಎಂ. ಕಾರ್ಯಕ್ರಮ ನಿರೂಪಿಸಿದರು.