ಮೈಸೂರು: ಮಹಾತ್ಮಗಾಂಧಿ ಅವರು 1948ರಲ್ಲಿ ಕೋಮು ಸಾಮರಸ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡಿ ನಂತರ 2 ದಿನಗಳಲ್ಲಿ ಮೃತಪಟ್ಟರು ಎಂದು ಮಾಧ್ಯಮವೊಂದು ಬರೆದಿತ್ತು. ‘ಮಹಾತ್ಮಗಾಂಧಿ ಅವರು ಮೃತಪಡಲಿಲ್ಲ, ಅವರನ್ನು ಭಯೋತ್ಪಾದಕರು ಕೊಂದರು’ ಎಂದು ನಾನು ಆ ಮಾಧ್ಯಮಕ್ಕೆ ಹೇಳಿದ್ದೆ. ಈ ರೀತಿ ದೇಶದಲ್ಲಿ ಹೇಗೆ ಅಪಪ್ರಚಾರವನ್ನು ಬಿತ್ತಲಾಗುತ್ತಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಮುಂದಿನ ತಲೆಮಾರಿಗೆ ಇತಿಹಾಸವನ್ನೇ ತಿರುಚುವ ಕಾರ್ಯ ನಡೆಯುತ್ತಿದೆ ಎಂದು ನಟ ಪ್ರಕಾಶ್ ರಾಜ್ ಕಳವಳ ವ್ಯಕ್ತಪಡಿಸಿದರು.
ಮೈಸೂರು ರಂಗಾಯಣ ಮಂಗಳವಾರ ಆಯೋಜಿಸಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಭವಿಷ್ಯದಲ್ಲಿ ಇತಿಹಾಸ ಬರೆಯುವಾಗ ಮುಂದಿನ ತಲೆಮಾರು ತಪ್ಪು ಮಾಡಿದವರನ್ನು ಮರೆಯಬಹುದೇನೋ, ಆದರೆ ಮೌನವಾಗಿದ್ದವರನ್ನು ಎಂದಿಗೂ ಮರೆಯುವುದಿಲ್ಲ. ಮೌನವಾಗಿರುವವರನ್ನು ಮುಂದಿನ ತಲೆಮಾರು ಕ್ಷಮಿಸುವುದಿಲ್ಲ. ಅನ್ಯಾಯ ಕಂಡಾಗ ಮಾತನಾಡಬೇಕು ಹಾಗೂ ಪ್ರಶ್ನಿಸಬೇಕು ಎಂದರು.