ಜಿಲ್ಲೆ

ಗಾಂಧೀಜಿ, ಶಾಸ್ತ್ರೀ ದೇಶಕ್ಕೆ ಮಾದರಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಣ್ಣನೆ

ಮಂಡ್ಯ: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜೀವನ, ಆದರ್ಶ ದೇಶದ ನಾಗರಿಕರಿಗೆ ಮಾದರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನೆಹರು ಯುವ ಕೇಂದ್ರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅನನ್ಯ ಹಾರ್ಟ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಅವರ 155ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ 120ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧೀಜಿ ಅವರ ಸಾಧನೆ ಹಾಗೂ ಕೊಡುಗೆ ಅಪಾರ. ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಅತ್ಯಂತ ಸದೃಢ ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಪ್ರಧಾನಿಯಾಗಿ ಕೃಷಿ ಸೇರಿದಂತೆ ಅನೇಕ ಯೋಜನೆಗಳನ್ನು ಲೋಕ ಕಲ್ಯಾಣಕ್ಕಾಗಿ ತಂದವರು ಎಂದರು.

ಮಹಾತ್ಮ ಗಾಂಧೀಜಿ ಅವರು ಯಾವುದೇ ಆಸೆ, ಆಮಿಷಗಳಿಗೆ ಒಳಪಡದೆ ಅಹಿಂಸಾತ್ಮಕವಾಗಿ ಅನೇಕ ಹೋರಾಟವನ್ನು ಪ್ರಾರಂಭ ಮಾಡಿದವರು. ಈ ಸಂದರ್ಭದಲ್ಲಿ ಬಂದಂತಹ ಅನೇಕ ಸಮಸ್ಯೆಗಳನ್ನು ಎದುರಿಸಿ ಇಡೀ ದೇಶದ ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಅಂದು ದೇಶದಲ್ಲಿ ರೈತರು ಹಾಗೂ ಸೈನಿಕರನ್ನು ಹುರಿದುಂಬಿಸಲು ’ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆಯ ಮೂಲಕ ದೇಶದ ರೈತರಿಗೆ ಗೌರವ ಹಾಗೂ ಮನ್ನಣೆ ನೀಡಿ ಹಸಿರು ಕ್ರಾಂತಿಗೆ ಪ್ರೇರಣೆ ನೀಡಿದವರು ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಗಾಂಧೀಜಿ ಅವರ ಅಹಿಂಸಾ ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಸಕ ರವಿಕುಮಾರ್ ಗಣಿಗ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಂ, ಮಾಜಿ ಶಾಸಕ ಎಂ.ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ನೆಹರು ಯುವ ಕೇಂದ್ರದ ಹರ್ಷ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.

ಇದೇ ವೇಳೆ ಕಾಟನ್ ಬಟ್ಟೆಯ ಮೇಲೆ ಕೈ ಬರಹದಲ್ಲಿ ಬರೆದ ಬ್ಯಾನರ್ ಅಳವಡಿಸಿದ್ದು ವಿಶೇಷವಾಗಿತ್ತು. ಅಂತೆಯೇ ವಿವಿಧ ಧರ್ಮದ ಎಚ್.ಎನ್.ಪದ್ಮನಾಬ್, ಜಯಂತ್ ಪ್ರಸಾದ್, ತನ್ವೀರ್, ಶಾಂತಿ ಪ್ರಸಾದ್ ಜೈನ್ ಸರ್ವಧರ್ಮ ಪ್ರಾರ್ಥನೆ ನಡೆಸಿಕೊಟ್ಟರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗಾಯಕರು ಗಾಂಧೀಜಿ ಅವರ ಕುರಿತು ಗೀತಾ ಗಾಯನವನ್ನು ನಡೆಸಿಕೊಟ್ಟರು.