ವಿಜಯವಾಣಿ ಸುದ್ದಿಜಾಲ ಧಾರವಾಡ
ಮಠದ ಸಂಸ್ಕಾರ ಪಡೆದವರು ಜ್ಞಾನದ ಬೆಳಕಿನಡೆ ಸಾಗಿ ತಮ್ಮ ಭವಿಷ್ಯ ಪ್ರಜ್ವಲಿಸಿಕೊಳ್ಳುತ್ತಾರೆ ಎಂದು ಉಪ್ಪಿನಬೆಟಗೇರಿ ವಿರಕ್ತಮಠದ ಶ್ರೀ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ನಗರದ ಮುರಘಾಮಠದಲ್ಲಿ ಸೋಮವಾರ ಏರ್ಪಡಿಸಿದ್ದ ತ್ರಿವಿಧ ದಾಸೋಹಮೂರ್ತಿ ಲಿಂ. ಶ್ರೀ ಮಹಾಂತಪ್ಪಗಳ ಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಮಠದಲ್ಲಿ ನಿರಂತರವಾಗಿ ಶಿಕ್ಷಣ ಹಾಗೂ ದಾಸೋಹ ನಡೆಸಿಕೊಂಡು ಬಂದಿದ್ದ ಅಪ್ಪಗಳು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅಕ್ಷರ, ಅನ್ನದಾಸೋಹ ಕಾರ್ಯವನ್ನು ಇಷ್ಟಲಿಂಗ ಪೂಜೆ ಎಂದು ಭಾವಿಸಿ, ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಮುನ್ನಡೆಸಿಕೊಂಡು ಬಂದಿದ್ದರು. ಅಂತಹವರನ್ನು ನಿತ್ಯ ಪೂಜಿಸಬೇಕು ಎಂದರು.
ಅಮ್ಮಿನಭಾವಿ ಪಂಚಗೃಹ ಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಂತರಂಗ ಹಾಗೂ ಬಹಿರಂಗಗಳಲ್ಲಿ ಸತ್ಯಶುದ್ಧ ಆಚರಣೆ ಇದ್ದಾಗ ದೇವರೇ ನಮ್ಮನ್ನು ಪ್ರೀತಿಸುತ್ತಾನೆ. ಧರ್ಮ, ವೈಚಾರಿಕತೆ ಬೆಳೆಸಿಕೊಂಡು, ದೇವರು, ದಯೆ, ಭಕ್ತಿ, ಗುರುವಿನ ಮಾರ್ಗದರ್ಶನ ಪಡೆದು ನಮ್ಮ ಬದುಕಿಗೆ ನಾವು ಒಳ್ಳೆಯವರಾಗಬೇಕು ಎಂದರು.
ಮುರಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಜ್ಞಾನ ದೊರೆತಾಗಲೇ ನಮ್ಮ ಅಜ್ಞಾನದ ಅಂಧಕಾರ ದೂರವಾಗಲು ಸಾಧ್ಯ. ಅಪ್ಪಗಳು ನಮಗೆಲ್ಲರಿಗೂ ಸುಜ್ಞಾನದ ಮಾರ್ಗದರ್ಶನ ಮಾಡಿದವರು. ಜೀವನದುದ್ದಕ್ಕೂ ತ್ಯಾಗಭಾವನೆ ಎಲ್ಲರೊಂದಿಗೆ ಪ್ರೀತಿಯಿಂದ ಸಹಕರಿಸಿಕೊಂಡು ನಡೆದಿದ್ದರು. ಅವರ ಸಾತ್ವಿಕತೆ, ವಿಚಾರದ ಜ್ಞಾನ ಭಂಡಾರವನ್ನು ಎಲ್ಲರೂ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದರು.
ಪ್ರೊ. ದಾನಯ್ಯ ಹಿರೇಮಠ ಉಪನ್ಯಾಸ ನೀಡಿದರು. ಡಾ.ಶಂಭು ಬಳಿಗಾರ, ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ.ಲಕಮನಹಳ್ಳಿ, ವಿ.ಎಂ. ಕಟಗಿ, ಬಾಪುಗೌಡ ಪಾಟೀಲ, ಎಸ್.ಎಸ್. ಲಕ್ಷ್ಮೇಶ್ವರ, ಸಿ.ಎಸ್.ಪಾಟೀಲ, ಇತರರು ಇದ್ದರು. ಮಲ್ಲಪ್ಪ ಗಾಣಗೇರ ಸ್ವಾಗತಿಸಿದರು.
ಇದಕ್ಕೂ ಪೂರ್ವದಲ್ಲಿ ಶ್ರೀ ಮಹಾಂತಪ್ಪಗಳ ಭಾವಚಿತ್ರದ ಪಲ್ಲಕ್ಕಿ ಮೆರವಣಿಗೆ ಶ್ರೀಮಠದ ಆವರಣದಲ್ಲಿ ನೇರವೇರಿತು.