ಹಿರೀಸಾವೆ: ಹೋಬಳಿಯಾದ್ಯಂತ ಈಶ್ವರ ಹಾಗೂ ವಿವಿಧ ದೇಗುಲಗಳಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ಶಿವಲಿಂಗಕ್ಕೆ ಅಭಿಷೇಕ, ಅಲಂಕಾರ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಬೆಳಗ್ಗೆಯಿಂದಲೇ ದೇಗುಲಗಳಿಗೆ ಹೂವಿನ ಚಪ್ಪರ ಹಾಕಿ, ರಂಗೋಲಿ ಬಿಡಿಸಿ, ಬಾಳೆ ಕಂಬಗಳನ್ನು ಕಟ್ಟಿ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಮುಂಜಾನೆಯಿಂದಲೇ ಭಕ್ತರು ದೇಗುಲಗಳಿಗೆ ತೆರಳಿ ಹಣ್ಣು-ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ಪಟ್ಟಣದ ಶ್ರೀ ಸೋಮೇಶ್ವರ ದೇಗುಲ, ಶ್ರೀ ಕ್ಷೇತ್ರ ಕಬ್ಬಳಿ, ಶ್ರೀ ಬಸವೇಶ್ವರಸ್ವಾಮಿ, ಪುರದ ಶ್ರೀ ವೀರಭದ್ರೇಶ್ವರ, ದಿಡಗ ಗ್ರಾಮದ ಬಾಣೇಶ್ವರ ಮತ್ತು ಬಿಲ್ಲೇಶ್ವರ, ಉಳ್ಳಾವಳ್ಳಿ ಶಿವ ದೇವಾಲಯ, ಪಿ.ಹೊಸಹಳ್ಳಿ ಶ್ರೀ ಮಲ್ಲೇಶ್ವರಸ್ವಾಮಿ, ಬಿಳಿಕೆರೆ ಶ್ರೀ ಕಲ್ಲೇಶ್ವರಸ್ವಾಮಿ ಸೇರಿದಂತೆ ಹೋಬಳಿಯ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಶ್ರೀ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಶ್ರೀ ಶಿವಪುತ್ರನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಬಸವೇಶ್ವರಸ್ವಾಮಿಗೆ ಪೂಜಾ ಕೈಂಕರ್ಯಗಳು ಜರುಗಿದವು. ರಾಜಾಪುರ ಗೇಟ್ ಬಳಿಯಿರುವ ಶ್ರೀ ಸಾಯಿಬಾಬ ಮಂದಿರದಲ್ಲಿ ಶ್ರೀ ಗುರುಮೂರ್ತಿ ಗುರೂಜಿ ವಿಶೇಷ ಪೂಜೆ ಸಲ್ಲಿಸಿದರು.
ವಿವಿಧೆಡೆ ರಾತ್ರಿ ಜಾಗರಣೆ ವೇಳೆ ಶನಿದೇವರ ಕತೆ, ಹರಿಕಥೆ, ಭಜನೆ ಹಾಗೂ ಪಾರಾಯಣ ಜರುಗಿದವು. ಶನಿವಾರ ಬೆಳಗ್ಗೆ ಶಿವ ದೇವಾಲಯಗಳಲ್ಲಿ ಅಭಿಷೇಕ ಹಾಗೂ ವಿಶೇಷ ಪೂಜೆಯೊಂದಿಗೆ ಮಹಾ ಮಂಗಳಾರತಿ ನಂತರ ಅನ್ನದಾಸೋಹ ನಡೆಯಿತು.
ಶ್ರಮದಾನ: ಹೋಬಳಿಯ ದಿಡಗ ಹಳೇ ಗ್ರಾಮದ ಕೆರೆ ಕೋಡಿಯಲ್ಲಿ ಶಿಥಿಲಗೊಂಡಿರುವ 1250 ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಹೊಯ್ಸಳರ ಕಾಲದ ಶ್ರೀ ಬಿಲ್ಲೇಶ್ವರ ದೇಗುಲದ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ಗ್ರಾಮಸ್ಥರು ತೆರವುಗೊಳಿಸಿ ಶಿವರಾತ್ರಿ ಹಬ್ಬವನ್ನು ಆಚರಿಸಿದರು.