ಜಿಲ್ಲೆ

ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮಾ. 7ರಿಂದ

ಸುಭಾಸ ಹೆಗಡೆ ಧೂಪದಹೊಂಡ

ಗೋಕರ್ಣ: ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮಾರ್ಚ್ 7ರಿಂದ 15ರವರೆಗೆ ಜರುಗಲಿದೆ. ಈ ಹಿನ್ನೆಲೆಯಲ್ಲಿ ಮಹಾಬಲೇಶ್ವರ ಮಂದಿರದ ಚಂದ್ರಶಾಲೆಯಲ್ಲಿ ಮಂಗಳವಾರ ಉತ್ಸವ ಸಮಿತಿಯ ಪೂರ್ವ ಸಿದ್ಧತೆ ಸಭೆ ಜರುಗಿತು.

ಪ್ರತಿವರ್ಷ ಮಹಾಶಿವರಾತ್ರಿ ನಿಮಿತ್ತ ಸಮುದ್ರ ತೀರದಲ್ಲಿ ನಿರ್ವಿುಸಲಾಗುವ ವಿಶೇಷ ವೇದಿಕೆಯಲ್ಲಿ 9 ದಿನಗಳ ಕಾಲ ಪ್ರತಿ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಜಾತ್ರೆ ಸಮಯದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸುವ ಭಕ್ತರನ್ನು ಹೇಗೆ ನಿರ್ವಹಿಸಬೇಕು ಎಂಬ ಕುರಿತು ಸಭೆಯಲ್ಲಿ ರ್ಚಚಿಸಲಾಯಿತು.

ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಮಾಹಿತಿ ನೀಡಿ, ಸರ್ಕಾರದ ಸುತ್ತೋಲೆ ಅನುಸರಿಸಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಮಾರ್ಗದರ್ಶನ ಪಡೆದು ಭಕ್ತರ ನಿರ್ವಹಣೆ ಬಗ್ಗೆ ನಿರ್ಧರಿಸಲಾಗುವುದು. ಉಳಿದಂತೆ ಮಹಾಶಿವರಾತ್ರಿಯಲ್ಲಿ ವಾರ್ಷಿಕವಾಗಿ ಜರುಗುವ ಎಲ್ಲ ಆಗಮೋಕ್ತ ಧಾರ್ವಿುಕ ಕಾರ್ಯಗಳು ಪ್ರತಿವರ್ಷದಂತೆ ನಡೆಯುತ್ತವೆ ಎಂದರು.

ಸಭೆಯಲ್ಲಿ ಉತ್ಸವ ಸಮಿತಿಯ ಡಾ. ಶೀಲಾ ಹೊಸ್ಮನೆ, ಮಂದಿರದ ಜಿ.ವಿ. ಹೆಗಡೆ, ತಾಪಂ ಸದಸ್ಯ ಮಹೇಶ ಶೆಟ್ಟಿ, ಶ್ರೀಮಠದ ವೇ. ಆಚಾರ್ಯ ಗಜಾನನ ಭಟ್ಟರು, ಶಾಂತಾರಾಮ ಹಿರೇಮನೆ, ರಾಘವೇಂದ್ರ ಮಧ್ಯಸ್ಥ, ಉಪಾಧಿವಂತ ಮಂಡಳ ಸ. ಕಾರ್ಯದರ್ಶಿ ವೇ.ಪರಮೇಶ್ವರ ಮಾರ್ಕಾಡೆ, ದತ್ತಾತ್ರೇಯ ಹಿರೇಗಂಗೆ, ಸದಾನಂದ ಹರಿಕಂತ್ರ, ಈಶ್ವರ ಗೌಡ, ಬೀರಣ್ಣ ನಾಯಕ ಅಡಿಗೋಣ, ಜಯರಾಮ ಹೆಗಡೆ ಇತರರಿದ್ದರು.

ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮಾ. 7ರಿಂದ ಆರಂಭವಾಗಿ 15 ರಂದು ಸಂಪನ್ನವಾಗಲಿದೆ. ಮಾ. 11 ಮಹಾಶಿವರಾತ್ರಿ, 13 ಮಹಾಅಮಾವಾಸ್ಯೆ, 14 ರಂದು ಶ್ರೀ ಮಹಾಬಲೇಶ್ವರ ಮಹಾರಥೋತ್ಸವ ನಡೆಯಲಿದೆ.