ಜಿಲ್ಲೆ

ಶುಕ್ರವಾರದಿಂದ ಬೆಂಗಳೂರಿನಲ್ಲಿ ಮಹಾರುದ್ರ ಕಿರಾತಮೂರ್ತಿ ಯಜ್ಞ; ಬಾಗಲಗುಂಟೆ ಎಂಇಐ ಮೈದಾನದಲ್ಲಿ ಕಾರ್ಯಕ್ರಮ

ಬೆಂಗಳೂರು: ಲೋಕ ಕಲ್ಯಾಣ ಹಾಗೂ ನಾಡಿನ ರೈತರ ಹಿತಕ್ಕಾಗಿ ರೀಪ್ ೌಂಡೇಶನ್ ಕರ್ನಾಟಕದಲ್ಲಿ ಹಮ್ಮಿಕೊಂಡಿರುವ ಮಹಾರುದ್ರ ಕಿರಾತ ಮೂರ್ತಿ ಯಜ್ಞವು ಶುಕ್ರವಾರದಿಂದ ಮೂರು ದಿನಗಳ ಕಾಲ ಬೆಂಗಳೂರಿನ ಬಾಗಲಗುಂಟೆಯ ಹೆಸರಘಟ್ಟ ರಸ್ತೆಯ ಎಂಇಐ ಮೈದಾನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಮಿತಿ ಅಧ್ಯಕ್ಷ ಶಾಸಕ ಎಸ್.ಮುನಿರಾಜು ತಿಳಿಸಿದ್ದಾರೆ.

ಜೂ.13ರಂದು ಸ್ಥಳಶುದ್ಧಿ, ವಾಸ್ತು ಪೂಜೆಯೊಂದಿಗೆ ಧಾರ್ಮಿಕ ಚಟುವಟಿಕೆಗಳಿಗೆ ಚಾಲನೆ ದೊರೆಯಲಿದ್ದು, ಜೂ.14ರಂದು ಬೆಳಗ್ಗೆ 11 ಗಂಟೆಗೆ ಉತ್ಸವದ ಸಾರ್ವಜನಿಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಶ್ರೀಮಧುಸೂದನ್ ಸಾಯಿ, ಅವಧೂತ ವಿನಯ ಗುರೂಜಿ, ಬ್ರಹ್ಮಶ್ರೀ ಮೋಹನ್‌ಜಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರ ರಾಮಚಂದ್ರೇಗೌಡ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅಂದು ಇಡೀ ದಿನ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿವೆ.

ಜೂ.15ರಂದು ವಿಶೇಷವಾಗಿ ಮಧ್ಯಾಹ್ನ 3 ಗಂಟೆಯಿಂದ 24 ಸಾವಿರ ತೆಂಗಿನಕಾಯಿಗಳನ್ನು ಒಬ್ಬರೇ ದೈವ ಪಾತ್ರಿ ಒಡೆಯುವ ಮೂಲಕ ದೇವರಿಗೆ ಅರ್ಪಿಸುತ್ತಾರೆ. ಕೇರಳದಲ್ಲಿ 12 ಸಾವಿರ ತೆಂಗಿನಕಾಯಿಗಳನ್ನು ಅರ್ಪಿಸುವ ಪಂದಿರಾಯಿ ಸೇವೆಯು ಬೆಂಗಳೂರಿನಲ್ಲಿ ಜೋಡಿಸೇವೆಯಾಗಿ ನಡೆಯಲಿದೆ. ಬರಗಾಲ, ಪ್ರಕೃತಿ ವಿಕೋಪ ಮತ್ತಿತರ ಸಾಮೂಹಿಕ ಸಮಸ್ಯೆಗಳು ಎದುರಾದಾಗ ನಾಡಿನ ಹಿತಚಿಂತನೆಗಾಗಿ ಈ ಪೂಜೆಯನ್ನು ಋಷಿಮುನಿಗಳು ಕೇರಳದಲ್ಲಿ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಆಯೋಜಿಸಲಾಗಿದೆ. ದಾಸರಹಳ್ಳಿ ಕ್ಷೇತ್ರದ ಸುತ್ತಮುತ್ತ ಬಹಳಷ್ಟು ಸಂಖ್ಯೆಯಲ್ಲಿ ಕೇರಳಿಗರು ವಾಸವಾಗಿದ್ದಾರೆ. ಈ ಪೂಜೆಯಲ್ಲಿ ಎಲ್ಲ ಸಾರ್ವಜನಿಕರು ಭಾಗವಹಿಸಲು ಅವಕಾಶವಿದ್ದು, ಸಮಿತಿ ನಿಗದಿ ಪಡಿಸಿದಂತೆ ಹಣ ಕಟ್ಟಿ ತಮ್ಮ ಕೈಲಾದಷ್ಟು ತೆಂಗಿನಕಾಯಿಗಳನ್ನು ಅರ್ಪಿಸಬಹುದು ಎಂದು ಮುನಿರಾಜು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಪಾಲಿಕೆ ಸದಸ್ಯ ನಾಗರಾಜ, ರೀಪ್ ೌಂಡೇಶನ್ ಮುಖ್ಯಸ್ಥ ಗೋಪಿನಾಥ ವನ್ನೇರಿ, ಕಾರ್ಯದರ್ಶಿ ಜಯರಾಜನ್ ಮತ್ತಿತರರು ಉಪಸ್ಥಿತರಿದ್ದರು.

ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಆರ್ಥಿಕ ಸೇವೆ ಮಾಡಲು ಇಚ್ಛಿಸುವವರು ಈ ಕೆಳಗಿನ ಕ್ಯೂಆರ್ ಕೋಡ್ ಮೂಲಕ ಸಲ್ಲಿಸಬಹುದು.

"ಕೇರಳದಲ್ಲಿ ಈ ದೇವರನ್ನು ಕ್ಷಿಪ್ರ ಪ್ರಸಾದಿ ಎನ್ನಲಾಗುತ್ತದೆ. ಈ ದೇವರ ಆಶೀರ್ವಾದ ಕರ್ನಾಟಕದ ಜನತೆಗೆ ದೊರೆಯಬೇಕೆಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಕರೆತರಲಾಗುತ್ತಿದೆ. ಬೆಂಗಳೂರಿನಲ್ಲಿ ಸುಮಾರು 20 ಲಕ್ಷ ಕೇರಳಿಗರು ಬದುಕು ಕಟ್ಟಿಕೊಂಡಿದ್ದು, ಅದರ ಕೃತಜ್ಞತೆಗಾಗಿ ಕರ್ನಾಟಕದಲ್ಲಿ ಈ ಪೂಜೆ ಏರ್ಪಡಿಸಲಾಗಿದೆ." -ಗೋಪಿನಾಥ ವನ್ನೇರಿ, ಯಜ್ಞಾಚಾರ್ಯ