ಜಿಲ್ಲೆ

ಸಮುದಾಯ ಬೆಂಬಲದಿಂದ ಮೀಸಲಾತಿ ಹೋರಾಟ ಯಶಸ್ವಿ

reporterctd

ದಾವಣಗೆರೆ : ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ತಾವು ನಡೆಸಿದ ಹೋರಾಟಕ್ಕೆ ಇಡೀ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ಕೈಜೋಡಿಸಿದ್ದರಿಂದಲೇ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿತು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ನಗರದ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ನಡೆದ ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ತಾವು ನಿರಂತರ ಸತ್ಯಾಗ್ರಹ ಕೈಗೊಂಡಿದ್ದು ಒಂದು ಕಡೆಯಾದರೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮುದಾಯದ ಜನರು ಹಕ್ಕೊತ್ತಾಯ ಮಾಡಿದ್ದರ ಪರಿಣಾಮ ಸರ್ಕಾರಕ್ಕೆ ಬಿಸಿ ತುಪ್ಪವಾಯಿತು ಎಂದು ತಿಳಿಸಿದರು.
ಚುನಾವಣೆ ಬಂದಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಮತಗಳನ್ನು ಕೇಳುವ ಜನಪ್ರತಿನಿಧಿಗಳು ಅಧಿಕಾರಕ್ಕೆ ಬಂದ ನಂತರ ಈ ಸಮುದಾಯಗಳ ಹಿತವನ್ನು ಮರೆಯುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಮುಂದುವರಿದ ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ಮೀಸಲಾತಿ ನೀಡಿ, ಆ ಸಮುದಾಯಗಳನ್ನು ಓಲೈಸುವ ಕೆಲಸ ಮಾಡಿದೆ. ಆದರೆ ನಮಗೆ ಸಿಗಬೇಕಾದ ಸಂವಿಧಾನಬದ್ಧ ಹಕ್ಕುಗಳನ್ನು ದಾಕ್ಷಿಣ್ಯಕ್ಕೆ ಕೊಟ್ಟಂತೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ 29 ಸಾವಿರ ಕೋಟಿ ರೂ. ಒದಗಿಸಲಾಗಿತ್ತು. ಕಳೆದ ಬಜೆಟ್‌ನಲ್ಲಿ 21 ಸಾವಿರ ಕೋಟಿ ರೂ.ಗೆ ಇಳಿಕೆಯಾಗಿದೆ. ಇದಕ್ಕೆ ಸಂಘಟನೆ ಮತ್ತು ಜಾಗೃತಿ ಕೊರತೆಯೇ ಕಾರಣ ಎಂದರು.
2023ರ ಫೆ. 8 ಮತ್ತು 9 ರಂದು 5ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆ ನಡೆಯಲಿದೆ. ಇದು ಸಮುದಾಯ ಜಾಗೃತಿಯ ಜಾತ್ರೆಯಾಗಿದೆ. ಅಲ್ಲಿ ಸಮುದಾಯದವರು ಸೇರುವ ಮೂಲಕ ಒಗ್ಗಟ್ಟಿನ ಪ್ರದರ್ಶನ ಮಾಡಬೇಕು ಎಂದು ಕರೆ ಕೊಟ್ಟರು.