ಶೃಂಗೇರಿ: ಮಾನವನ ಜೀವನದಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಅದನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎಂಬ ಸಂದೇಶವನ್ನು ರಾಮಾಯಣದಲ್ಲಿ ಬರುವ ಪಾತ್ರಗಳ ಮೂಲಕ ಪ್ರಸ್ತುತಪಡಿಸಿದ ಮಹರ್ಷಿ ವಾಲ್ಮೀಕಿ ಶ್ರೇಷ್ಠ ದಾರ್ಶನಿಕ ಎಂದು ಮೆಣಸೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಎಂ.ಮರಿಸ್ವಾಮಿ ತಿಳಿಸಿದರು.
ಕನ್ನಡಭವನದಲ್ಲಿ ಗುರುವಾರ ತಾಲೂಕು ಆಡಳಿತ, ತಾಪಂ ಮತ್ತು ಸಮಾಜಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ರಾಮಾಯಣ ಅಪೂರ್ವವಾದ ಮಹಾ ಕಾವ್ಯ. ದಶರಥ, ರಾಮ, ಸೀತೆ, ಲವ, ಕುಶ ಅವರ ಪಾತ್ರಗಳನ್ನು ರಚಿಸುವ ಮೂಲಕ ಬದುಕಿನ ದಾರ್ಶನಿಕತೆಯನ್ನು ತೆರೆದಿಟ್ಟು ಜಗತ್ತಿಗೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.
ಪ್ರಸ್ತುತ ಸಮಾಜದಲ್ಲಿ ಎದುರಾಗುವ ಸವಾಲುಗಳನ್ನು ಮಾನವೀಯ ಮೌಲ್ಯಗಳ ದೃಷ್ಟಿಕೋನದಿಂದ ಎದುರಿಸಬೇಕು. ಆಗ ಸಮಾಜದಲ್ಲಿ ಸುಸಂಸ್ಕೃತ ವಾತಾವರಣ ನಿರ್ಮಾಣವಾಗುತ್ತದೆ ಎಂಬ ಮಹನೀಯರ ವಿಚಾರಗಳು ಆಚರಣೆಗೆ ಬಂದಾಗ ಮಾತ್ರ ನಾವು ಆಚರಿಸುವ ಜಯಂತಿ ಅರ್ಥಪೂರ್ಣವಾಗುತ್ತವೆ ಎಂದರು. ಪಪಂ ಅಧ್ಯಕ್ಷ ಎಚ್.ಎಸ್.ವೇಣುಗೋಪಾಲ್, ತಾಪಂ ಅಧಿಕಾರಿ ಪಾರ್ವತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ ಇತರರಿದ್ದರು.