ವಿಜಯಪುರ: ಆದಿಕವಿ ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಎಂಬ ಮಹಾಕಾವ್ಯದ ಮೂಲಕ ಮಾನವೀಯತೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಜಗತ್ತಿಗೆ ನೀಡಿದ್ದು, ಆ ಮೌಲ್ಯಗಳನ್ನು ಸರ್ವರೂ ಅನುಸರಿಸಬೇಕೆಂದು ನಾಗಠಾಣ ಶಾಸಕ ವಿಠಲ ಕಟಕದೊಂಡ ಹೇಳಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಮಾಯಣದಲ್ಲಿ ಆದರ್ಶ ವ್ಯಕ್ತಿಯ ಚಿತ್ರಣ, ಕೌಟುಂಬಿಕ, ಮಾನವೀಯತೆ ಹಾಗೂ ಸಾಮಾಜಿಕ ಮೌಲ್ಯ ಕಾಣಬಹುದಾಗಿದೆ. ಮನುಕುಲದ ಏಳಿಗೆಗಾಗಿ ಅವರು ನೀಡಿದ ಸಂದೇಶ ದಾರಿ ದೀಪವಾಗಿದೆ. ರಾಮಾಯಣದಲ್ಲಿ ಪ್ರತಿಯೊಬ್ಬರು ಜೀವನದಲ್ಲಿ ಎದುರಿಸುವ ಸಂಗತಿಗಳು ಅಡಕವಾಗಿದ್ದು, ನಿತ್ಯ ಸತ್ಯವಾಗಿರುವ ಜೀವನ ಮೌಲ್ಯಗಳನ್ನು ಹಾಗೂ ಸಂದೇಶಗಳನ್ನು ಮಹಾಕಾವ್ಯದ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಆ ವಿಚಾರಗಳನ್ನು ಪಾಲಿಸೋಣ. ವಾಲ್ಮೀಕಿ ಮಹರ್ಷಿ ಅವರ ನೀತಿ ಉಕ್ತಿಗಳು ಉತ್ತಮ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಆನಂದ ಕೆ. ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ರಾಮಾಯಣದ ಕಾವ್ಯದಲ್ಲಿ ಉಲ್ಲೇಖಿಸಿರುವ ಚಿಂತನೆಗಳನ್ನು ತಿಳಿದುಕೊಳ್ಳಬೇಕು. ಅದರಲ್ಲಿನ ಅಂಶಗಳು ಸುಂದರ ಭವಿಷ್ಯಕ್ಕೆ ಭದ್ರ ಅಡಿಪಾಯ ಒದಗಿಸುತ್ತವೆ. ಬದುಕಿನ ಧಾವಂತದಲ್ಲಿ ನಮ್ಮನ್ನು ನಾವು ಅಂತರಾವಲೋಕನ ಮಾಡಿಕೊಂಡು, ಉತ್ತಮ ಬದುಕು ರೂಪಿಸಿಕೊಳ್ಳುವೆಡೆಗೆ ಸಾಗಬೇಕು. ಮಹಾನ್ ವ್ಯಕ್ತಿಗಳು ನೀಡಿದ ಸಂದೇಶ ಅವರ ಚಿಂತನೆಗಳನ್ನು ಅರಿತುಕೊಂಡು ಸಾರ್ಥಕ ಜೀವನ ಹೊಂದೋಣ. ಇಂತಹ ಜಯಂತಿಗಳ ಮೂಲಕ ಮಹನೀಯರ ಆದರ್ಶ ಮೌಲ್ಯಗಳನ್ನು ಕೇವಲ ಒಂದು ದಿನಕ್ಕೆ ಸ್ಮರಿಸಿಕೊಳ್ಳದೆ ಅವರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ರಾಮಾಯಣದಲ್ಲಿ ಅಡಕಗೊಂಡ ವಿಚಾರಗಳನ್ನು ಯುವಜನರಿಗೆ ತಿಳಿಸಿಕೊಡಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು.
ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ರಾಮಾಯಣದ ಮಹಾಕಾವ್ಯದಲ್ಲಿ ಸಂವಿಧಾನದ ಆಶಯವನ್ನು ಕಾಣಬಹುದಾಗಿದೆ. ಸಮಾನತೆ, ಭ್ರಾತೃತ್ವ, ಒಗ್ಗೂಡಿ ಬಾಳುವಿಕೆಯಂತಹ ಚಿಂತನೆಯನ್ನು ಕಾವ್ಯದಲ್ಲಿ ಚಿತ್ರಿಸಿದ ವಾಲ್ಮೀಕಿಯವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ನಮ್ಮಲ್ಲಿನ ಕೆಟ್ಟ ಗುಣಗಳನ್ನು ನೀಗಿ ಉತ್ತಮತೆಯನ್ನು ಅಳವಡಿಸಕೊಳ್ಳಲು ರಾಮಯಾಣದ ಅಂಶಗಳು ತಿಳಿಸಿಕೊಡುತ್ತವೆ. ಪ್ರಕೃತಿಯ ಸೌಂದರ್ಯ ಹಾಗೂ ಆರಾಧನೆಯನ್ನು ವಾಲ್ಮೀಕಿಯವರ ಮಹಾಕಾವ್ಯದಲ್ಲಿ ಕಾಣಬಹುದಾಗಿದೆ. ಕಷ್ಟಗಳನ್ನು ಮೆಟ್ಟಿ ನಿಂತು, ನಕಾರಾತ್ಮಕ ಭಾವನೆಗಳನ್ನು ತೊಡೆದು ಹಾಕಿ, ಆತ್ಮ ವಿಶ್ವಾಸದಿಂದ ಮುನ್ನಡೆದು ಉನ್ನತ ಸಾಧನೆಗೆ ಮಹರ್ಷಿ ವಾಲ್ಮೀಕಿ ಚಿಂತನೆಗಳಿಂದ ಪ್ರೆರಣೆ ಹೊಂದಬೇಕು ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕ ಯಲ್ಲಪ್ಪ ನಾಯಕ ಉಪನ್ಯಾಸ ನೀಡಿ, ರಾಮಾಯಣ ಮಹಾಕಾವ್ಯದಲ್ಲಿರುವ ಪುಷ್ಪಕ ವಿಮಾನ ಇಂದಿನ ಇಂಜನೀಯರಿಗೆ ಸ್ಪೂರ್ತಿದಾಯಕವಾಗಿದೆ. ತಂದೆಯ ಮಾತಿಗೆ ಮನ್ನಣೆ ನೀಡಿದ ರಾಮನ ಗುಣ, ಸಹೋದರ ಪ್ರೇಮ, ಆದರ್ಶ ವ್ಯಕ್ತಿತ್ವ ಇಂಥಹ ಅನೇಕ ವಿಚಾರಗಳು ವಾಲ್ಮೀಕಿ ಮಹರ್ಷಿ ಅವರು ರಾಮಾಯಣದ ಮೂಲಕ ಮನುಕುಲಕ್ಕೆ ಉತ್ತಮ ಸಂದೇಶ ಹಾಗೂ ಚಿಂತನೆಗಳನ್ನು ನೀಡಿದ್ದಾರೆ. ರಾಮಾಯಣ ಕಾವ್ಯ 24 ಸಾವಿರ ಶ್ಲೋಕಗಳನ್ನು ಒಳಗೊಂಡಿದೆ. ಇದರಲ್ಲಿನ ವಿಚಾರಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದ ಅವರು, ಮಹರ್ಷಿ ವಾಲ್ಮೀಕಿ ಜೀವನ ವೃತ್ತಾಂತ ಕುರಿತಾಗಿ ಸವಿಸ್ತಾರವಾಗಿ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ರಂಗನಾಥ ಬತ್ತಾಸೆ ಹಾಗೂ ತಂಡದಿಂದ ನೃತ್ಯ ರೂಪಕ ನೋಡುಗರ ಕಣ್ಮನ ಸೆಳೆಯಿತು.
ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೋಳಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಹಿಂದುಳಿದ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲಿಕ ಮಾನವರ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ, ಜಿಲ್ಲಾ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ಅಧ್ಯಕ್ಷಕ ಎಸ್.ಎಂ. ಪಾಟೀಲ್, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಶೀಲಾ ಬಿರಾದಾರ, ಟಿ.ವಿ.ಮಂಟೂರು, ತಳವಾರ ಸಮಾಜ ಸೇವಾಸಮಿತಿ (ಟಿಎಸ್‌ಎಸ್) ಜಿಲ್ಲಾಧ್ಯಕ್ಷ ಸೋಮು ಜಮಾದಾರ, ಮಲ್ಲಿಕಾರ್ಜುನ ಬಟಗಿ, ರವಿ ಬಿಸನಾಳ, ಆನಂದ ಗೊರಗುಂಡಗಿ, ರವಿ ರಾಯಜಿ, ಸಂತೋಷ ತಳವಾರ, ಮಾಜಿ ಗ್ರಾಪಂ ಸದಸ್ಯ ಬಿ.ಟಿ. ನಾಯ್ಕೋಡಿ ಮತ್ತಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಕಂದಗಲ್ಲ ಹನುಮಂತರಾಯ ರಂಗಮಂದಿರದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.