ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಿಂದಲೇ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಕೈದಿಯನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ಲಷ್ಕರ್-ಎ-ತಯಬಾ ಮತ್ತು ಪಿಎಫ್‌ಐ ಜೊತೆ ಈತ ನಂಟು ಹೊಂದಿರುವ ಶಂಕೆಯಿಂದ ಕೈದಿ ಅಫ್ಸರ್ ಪಾಷಾ ಎಂಬಾತನನ್ನು ಕಸ್ಟಡಿಗೆ ಪಡೆದು ನಾಗ್ಪುರಕ್ಕೆ ಕರೆದೊಯ್ಯಲಾಗಿದೆ. ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಇಲ್ಲಿನ ಹಿಂಡಲಗಾ ಕಾರಾಗೃಹದಲ್ಲಿದ್ದ ಜಯೇಶ್ ಪೂಜಾರಿ ಎಂಬಾತ, ನಾಗ್ಪುರದಲ್ಲಿರುವ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ಬೆದರಿಕೆಯೊಡ್ಡಿದ್ದ. ತನ್ನ ಪಕ್ಕದ ಸೆಲ್‌ನಲ್ಲಿರುವ ಅಫ್ಸರ್ ಪಾಷಾ ಸೂಚನೆ ಮೇರೆಗೆ ಈ ಬೆದರಿಕೆ ಕರೆ ಮಾಡಿದ್ದಾನೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ. ಹಾಗಾಗಿ ಅಫ್ಸರ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.