ಜಿಲ್ಲೆ

ಹುಟ್ಟೂರಿನ ಗಣಪತಿ ನೋಡಿ ಖುಷಿಪಟ್ಟ ಮಹಾರಾಷ್ಟ್ರ ಎಂಪಿ

Uttara Kannada - Subash Hegde

ಕಾರವಾರ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಹಾಗೂ ಹಾಲಿ ಶಿವಸೇನಾ ಎಂಪಿ ಗಜಾನನ ಕೀರ್ತಿಕರ್ ಮೂಲತಃ ಕಾರವಾರದವರಾಗಿದ್ದು, ಶನಿವಾರ ಹುಟ್ಟೂರಿಗೆ ಆಗಮಿಸಿ ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡರು.
ಇಲ್ಲಿನ ಮಾರುತಿ ದೇವಸ್ಥಾನದ ಕಾರವಾರ ಚಾ ರಾಜಾ ಸಾರ್ವಜನಿಕ ಗಣಪತಿಯ ದರ್ಶನ ಪಡೆದ ಅವರು ನಂತರ ನಡೆದ ಸಭೆಯಲ್ಲಿ ಮಾತನಾಡಿದರು. ಕಾರವಾರದ ನನ್ನ ಹುಟ್ಟೂರು ಎಂಬ ಅಭಿಮಾನವಿದೆ. ನಾನು ಪುಣೆಗೆ ಹೋಗಿ ನೆಲೆಸಿ ಓದಿ, ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದರೂ ಈ ಊರಿನ ಜತೆ ನನ್ನ ಸಂಬಂಧ ಬಿಡಿಸಲಾರದ ನಂಟು. ಮಾರುತಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಹಣ ಸಂಗ್ರಹಿಸಿದ ನೆನಪು ಇನ್ನೂ ಇದೆ. ಈಗ ಅಂಕೋಲಾ ಮೂಲದ ಮುಂಬೈ ಉದ್ಯಮಿ ಕಿಶೋರ ಅವರ್ಸೇಕರ್ ನನ್ನನ್ನು ಇಲ್ಲಿಗೆ ಕರೆತಂದರು ಎಂದರು. ದೇವರ ದರ್ಶನ ಪಡೆದು ಖುಷಿಯಾಗಿದೆ ಎಂದು ಎಂಪಿ ಕೀರ್ತಿಕರ್ ಹೇಳಿದರು.

ಇದನ್ನೂ ಓದಿ: ಎನ್‌ಡಿಎ ಜತೆ ಜೆಡಿಎಸ್‌ ಸೇರಿರುವುದು ಸ್ವಾಗತಾರ್ಹ-ಗೋವಾ ಸಚಿವ ಫಳದೇಸಾಯಿ
ಸುವರ್ಣ ಮಹೋತ್ಸವದ ಸಲುವಾಗಿ 12 ಅಡಿ ಎತ್ತರದ ಗಣೇಶ ಮೂರ್ತಿ ಮಾಡಿದ ನಂದನಗದ್ದಾದ ಅಭಿನಂದನ ರಾಮ ಬಾಂದೇಕರ್ ಅವರನ್ನು ಸಭೆಯಲ್ಲಿ ಗೌರವಿಸಲಾಯಿತು. ಎಂಎಲ್‌ಸಿ ಗಣಪತಿ ಉಳ್ವೇಕರ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ದತ್ತಾತ್ರೆಯ ಸ್ವಾರ ವೇದಿಕೆಯಲ್ಲಿದ್ದರು. ರಾಜನ್ ಮಾಪ್ಸೆಕರ್ ಕಾರ್ಯಕ್ರಮ ನಿರೂಪಿಸಿದರು.