ಬೆಳಗಾವಿ : ಕರ್ನಾಟಕ ಹಲವು ಪ್ರದೇಶ ಮಹಾರಷ್ಟ್ರಕ್ಕೆ ಸೇರಬೇಕು ಎಂದು ಮೇಲಿಂದ ಮೇಲೆ ತಗಾದೆ ತೆಗೆಯುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಹಾರಾಷ್ಟ್ರದ ಮರಾಠಿಗರೇ ಠರಾವು ಪಾಸ್ ಮಾಡಿ ಮುಖಭಂಗ ಮಾಡಿದ್ದಾರೆ. ಕೊಲ್ಲಾಪೂರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಹತ್ತು ಗ್ರಾಮ ಪಂಚಾಯ್ತಿಗಳಲ್ಲಿ ಮಹಾರಾಷ್ಟ್ರದ ಹತ್ತು ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಿ ಕಾಗಲ್ ತಾಲೂಕಿನ ಜನರ ನಿರ್ಧಾರದಿಂದ ಮಹಾಸರ್ಕಾರ ಕಂಗಾಲ್ ಆಗಿದೆ.
ಮಹಾರಾಷ್ಟ್ರದ ಕಾಗಲ್ ತಾಲ್ಲೂಕಿನ ಹತ್ತು ಗ್ರಾಮ ಪಂಚಾಯ್ತಿಗಳಲ್ಲಿ ಕರ್ನಾಟಕಕ್ಕೆ ಸೇರುವ ಠರಾವ್ ಪಾಸ್ ಆಗಿರುವದರಿಂದ ಮಹಾರಾಷ್ಟ್ರ ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ. 90ರಷ್ಟು ಮಾರಾಠಿ ಭಾಷಿಕರಿರುವ ಜನರಿಂದ ಕರ್ನಾಟಕಕ್ಕೆ ಸೇರುವ ಬಗ್ಗೆ ಠರಾವು ಪಾಸ್ ಆಗಿರುವ ವಿಚಾರ ಮಹಾರಾಷ್ಟ್ರದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ. ಕರ್ನಾಟಕ ಸರ್ಕಾರದ ಜನಪರ ಯೋಜನೆ ಹಾಗೂ ರಾಜ್ಯದ ಅಭಿವೃದ್ಧಿ ಯೋಜನೆಗನ್ನು ಮೆಚ್ಚಿ ಮರಾಠಿ ಭಾಷಿಕರೇ ಈ ನಿರ್ಣಯ ಮಾಡಿರುವುದು ಮಹಾ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.
ಮಳೆಗಾಲ ಇದ್ರೂ ಕಾಗಲ್ ತಾಲೂಕಿನಲ್ಲಿ ನೀರಿನ ಸಮಸ್ಯೆ ಇದೆ, ಹೀಗಿದ್ದರೂ ದೂಧಗಂಗಾ ನದಿಯಿಂದ ಇಂಚಲಕರಂಜಿಗೆ ನೀರು ಸರಬರಾಜು ಮಾಡುತ್ತಿರುವ ಮಹಾ ಸರ್ಕಾರದ ನಿರ್ಧಾರಕ್ಕೆ ಕಾಗಲ್ ತಾಲ್ಲೂಕಿನ ಜನ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಜತ್ತ ತಾಲೂಕಿನ 42 ಹಳ್ಳಿಗಳೂ ಕರ್ನಾಟಕಕ್ಕೆ ಸೇರುವ ಇಂಗಿತ ವ್ಯಕ್ತ ಪಡಿಸಿ, ಸೂಕ್ತ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿದ್ದ ಮಹಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಂದು ತಾಲೂಕಿನ ಹತ್ತು ಗ್ರಾಮಗಳು ಕರ್ನಾಟಕಕ್ಕೆ ಸೇರ್ಪಡೆಯಾಗಲು ಉತ್ಸುಕವಾಗುರುವುದು ಗಡಿ ವಿವಾದಕ್ಕೆ ಮಂತ್ತೊಂದು ತಿರುವು ನೀಡಿದಂತಾಗಿದೆ.
ಕರ್ನಾಟಕದ 850ಹಳ್ಳಿಗಳನ್ನ ಕೇಳುತ್ತಿರುವ ಮಹಾರಾಷ್ಟ್ರಕ್ಕೆ ಕಾಗಲ್ ತಾಲೂಕಿನ ಬೇಡಿಕೆಯೇ ತಿರುಗುಬಾಣವಾಗಿದ್ದು, ಮಹಾರಾಷ್ಟ್ರ ಜತ್ತ ಕಾಲ್ಲೂಕಿನ 42 ಹಳ್ಳಿಗಳಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ನಿರ್ಣಯ ಕೈಗೊಂಡ ಕಾರಣ, ಮಹಾರಾಷ್ಟ್ರದ ಗಡಿಯಲ್ಲಿರುವ ಹಳ್ಳಿಗಳ ಅಭಿವೃದ್ಧಿಗೆ ಆಗ 1900ಕೋಟಿ ಅನುದಾನದ ಅಭಿವೃದ್ಧಿ ಪ್ಯಾಕೇಜ್ ಕೊಡುವುದಾಗಿ ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಭರವಸೆ ನೀಡಿದ್ದರು. ಈ ಬಗ್ಗೆ ಠರಾವ್ ಪಾಸ್ ಮಾಡುವ ಸಂದರ್ಭದಲ್ಲಿ ಎಲ್ಲ ಗ್ರಾಮಸ್ಥರು ಇನ್ನುಮುಂದೆ ಮಹಾರಾಷ್ಟ್ರ ಸರ್ಕಾರದ ಯಾವುದೇ ಆಶ್ವಾಸನೆ ನಮಗೆ ಬೇಕಿಲ್ಲ. ಕರ್ನಾಟಕ ರಾಜ್ಯಕ್ಕೆ ಸೇರ್ಪಡಿಸಲಿ ಎಂದು ಎಲ್ಲರೂ ಕೈ ಮೇಲಕ್ಕೆತ್ತುವ ಮೂಲಕ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದಾರೆ. ತುಂಬಿದ ಸಭೆಯಲ್ಲಿ ಕೈ ಮೇಲಕ್ಕೆತ್ತಿ ಕರ್ನಾಟಕಕ್ಕೆ ಸೇರುವ ನಿರ್ಧಾರ ಕೈಗೊಳ್ಳುವ ಮೂಲಕ ಮಹಾರಾಷ್ಟ್ರ ಮೊದಲು ತನ್ನ ರಾಜ್ಯದಲ್ಲಿ ಈಗಾಗಲೇ ಇರುವ ಹಳ್ಳಿಗಳಿಗೆ ಸೌಲಭ್ಯ ಒದಗಿಸಿ,ಅಭಿವೃದ್ಧಿಪಡಿಸಲಿ ಎಂದು ಒತ್ತಾಯಿಸಿದ್ದಾರೆ.