ಬೆಂಗಳೂರು: ಸಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ಹೆಣ್ಣುಮಕ್ಕಳು ಚಿಕಿತ್ಸಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ಲಿಂಗ ಪಕ್ಷಪಾತಗಳನ್ನು ತೊಡೆದುಹಾಕಿ, ಲಿಂಗ-ಸಮಾನ ಸಮಾಜ ನಿರ್ಮಾಣದತ್ತ ಕಾರ್ಯಪ್ರವೃತ್ತರಾಗಬೇಕು ಎಂದು ಮಹಿಳಾವಾದಿ ಚಿಂತಕಿ ಮತ್ತು ರಾಜ್ಯ ಅಕ್ಕಮಹಾದೇವಿ ಮಹಿಳಾ ಕ್ಲಸ್ಟರ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಹೇಳಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ 2ನೇ ಮತ್ತು 3ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಸಾಮಾಜಿಕವಾಗಿ ’ಅನುಕೂಲಕರ’ ಸ್ಥಾನದಲ್ಲಿರುವ ಯುವತಿಯರು, ತಮ್ಮಷ್ಟು ಅನುಕೂಲವಿಲ್ಲದ ಮಹಿಳಾ ಸಮುದಾಯದ ಬಗ್ಗೆ ಯೋಜಿಸಬೇಕು. ದಿನೇದಿನೆ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳ ಮೂಲ ಕಾರಣಗಳನ್ನು ತಿಳಿದು, ಅವನ್ನು ತಳಮಟ್ಟದಿಂದಲೇ ಕಿತ್ತುಹಾಕಬೇಕು. ಆ ನಿಟ್ಟಿನಲ್ಲಿ ತಮ್ಮ ಜವಾಬಾರಿ ಅರಿತು ನಡೆಯಬೇಕು ಎಂದರು.
ಹೆಣ್ಣುಮಕ್ಕಳ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಇಲ್ಲದಿದ್ದರೆ, ಅನೇಕ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಶಿಕ್ಷಣ ಪಡೆಯುವುದರ ಹೊರತಾಗಿಯೂ ಮಹಿಳಾ ಕಾಲೇಜುಗಳು ಮತ್ತು ಸಹ-ಶಿಕ್ಷಣ ಕಾಲೇಜುಗಳಲ್ಲಿ ಓದುತ್ತಿರುವ ಹೆಣ್ಣುಮಕ್ಕಳ ವ್ಯಕ್ತಿತ್ವದಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಸಹ-ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರು, ಕಾರ್ಯನಿರ್ವಹಿಸಿದವರು ಪ್ರತಿಭಾನ್ವಿತರಾಗಿದ್ದರೂ, ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದಿಲ್ಲ. ಸ್ವತಂತ್ರವಾಗಿ ಯೋಚಿಸುವುದಿಲ್ಲ. ಯಾವುದೇ ಜವಾಬ್ದಾರಿಯನ್ನು ಅವರ ಮೇಲೆ ಬಲವಂತವಾಗಿ ಹೇರದಿದ್ದರೆ ಸ್ವಇಚ್ಛೆಯಿಂದ ಸ್ವೀಕರಿಸುವುದಿಲ್ಲ. ಆದರೆ ಬಾಲಕಿಯರ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರು ಇದಕ್ಕೆ ವಿರುದ್ಧವಾಗಿದ್ದಾರೆ. ಅವರು ಪ್ರತಿಯೊಂದು ಕೆಲಸವನ್ನು ಸ್ವತಃ ಮಾಡಬೇಕಾಗಿರುವುದರಿಂದ ಯಾವುದೇ ಹಿಂಜರಿಕೆಯಿಲ್ಲದೆ ಎಲ್ಲ ಜವಾಬ್ದಾರಿಗಳನ್ನು ಹೊರುತ್ತಾರೆ ಎಂದು ಹೇಳಿದರು.
ಹೆಣ್ಣುಮಕ್ಕಳು ಶಿಕ್ಷಿತರಾಗಬೇಕು:
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ವೈವಾಹಿಕ ಹಾಗೂ ಸಾಮಾಜಿಕ ತೊಡಕುಗಳಿಂದ ಮಹಿಳೆಯರ ಓದು ಕುಂಠಿತವಾಗಲಿದೆ. ಆದರೆ ಇಂತಹ ಸವಾಲುಗಳನ್ನು ಮೆಟ್ಟಿ ನಿಂತು ಹೆಣ್ಣುಮಕ್ಕಳು ಶಿಕ್ಷಣವಂತರಾಗಬೇಕು. ಅದಕ್ಕಾಗಿ ಸರ್ಕಾರವೂ ಮಹಿಳೆಯರ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿವೇತನ ಸೇರಿ ಲಕ್ಷಾಂತರ ರೂ.ಗಳ ಯೋಜನೆಯನ್ನು ರೂಪಿಸಿದೆ. ಹೆಣ್ಣು ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಡಾಕ್ಟರೇಟ್ ಪದವಿ ಪ್ರದಾನ:
ಘಟಿಕೋತ್ಸವದಲ್ಲಿ ನಟಿ ಭಾರತಿ ವಿಷ್ಣುವರ್ಧನ್, ಹೋಮಿಯೋಪಥಿ ವೈದ್ಯ ಡಾ. ಬಿ.ಟಿ. ರುದ್ರೇಶ್, ಶಿಕ್ಷಣ ತಜ್ಞೆ ಡಾ. ಎಚ್.ಎನ್. ಉಷಾ, ಬಯೋಕಾನ್ ಲಿಮಿಟೆಡ್‌ನ ಡಾ. ಕಿರಣ್ ಮಜುಂದಾರ್ ಷಾ, ಮಾನವ ಹಕ್ಕುಗಳ ಹೋರಾಟಗಾತಿ ದು. ಸರಸ್ವತಿ ಮತ್ತು ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
3,573 ವಿದ್ಯಾರ್ಥಿನಿಯರಿಗೆ ಪದವಿ:
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ 2 ಮತ್ತು 3ನೇ ಘಟಿಕೋತ್ಸವದಿಂದ ಒಟ್ಟು 3,573 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ 107 ವಿದ್ಯಾರ್ಥಿನಿಯರು ರ‌್ಯಾಂಕ್ ಪಡೆದಿದ್ದು, 52 ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ನೀಡಿ ಪುರಸ್ಕರಿಸಲಾಯಿತು. ಮಹಾರಾಣಿ ಕ್ಲಸ್ಟರ್ ವಿವಿ ಉಪಕುಲಪತಿ ಡಾ.ಟಿ.ಎಂ. ಮಂಜುನಾಥ ಇತರರು ಉಪಸ್ಥಿತರಿದ್ದರು.
ಕೋಟ್:
ಶಿಕ್ಷಣದಿಂದ ಮಹಿಳಾ ಸಬಲೀಕರಣ
ಶಿಕ್ಷಣಕ್ಕೆ ಜಗತ್ತನ್ನು ಬದಲಾಯಿಸುವ ಶಕ್ತಿಯಿದೆ. ಹಾಗಾಗಿ ಶಿಕ್ಷಣದಿಂದ ಮಹಿಳೆಯರು ಸಬಲೀಕರಣ ಆಗಬೇಕು. ಆಗ ಪ್ರಗತಿಪರ ಮತ್ತು ಬಲಿಷ್ಠ ರಾಷ್ಟ ನಿರ್ಮಾಣಕ್ಕೆ ಬುನಾದಿ ಹಾಕಿದಂತಾಗುತ್ತದೆ. ದೇಶವು ಪ್ರಗತಿ ಹೊಂದಲು ಮಹಿಳೆಯರ ಪಾತ್ರ ಅಪಾರ. ಹಾಗಾಗಿ ಅವರಿಗೆ ಸಮಾನತೆ ಹಕ್ಕುಗಳನ್ನು ನೀಡಲು ಸಮಾಜ ಹಾಗೂ ರಾಜಕೀಯದಲ್ಲಿ ಮಹಿಳಾ ಮೀಸಲಾತಿಗೆ ಅವಕಾಶ ನೀಡಲಾಗಿದೆ. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಅಗಾಧ ಸೇವೆ ಸಲ್ಲಿಸಿ ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಥಾವರಚಂದ್ ಗೆಹಲೋತ್, ರಾಜ್ಯಪಾಲ
ಕೋಟ್
ನನಗೆ ಗೌರವ ಡಾಕ್ಟರೇಟ್ ಪದವಿ ದೊರೆತಿರುವುದು ನಾನು ನಂಬಿದ ಹೋಮಿಯೋಪಥಿಗೆ ಹಾಗೂ ನನ್ನನ್ನು ನಂಬಿರುವ ಜನರಿಗೆ ಸಂದ ಮನ್ನಣೆಯಾಗಿದೆ. ಇಂತಹ ಗೌರವ ಹಾಗೂ ಪ್ರಶಸ್ತಿಗಳು ಜೀವನದ ಮೈಲಿಗಲ್ಲುಗಳು ಹಾಗೂ ಜನತೆ ನಮ್ಮ ಮೇಲಿಟ್ಟಿರುವ ವಿಶ್ವಾಸ ಹಾಗೂ ನಂಬಿಕೆಯ ಪ್ರತೀಕವಾಗಿದೆ.
ಡಾ. ಬಿ.ಟಿ. ರುದ್ರೇಶ್, ಹೋಮಿಯೋಪಥಿ ವೈದ್ಯ