ವಿಜಯವಾಣಿ ಸುದ್ದಿಜಾಲ ಆನೇಕಲ್
ಐದು ಅಥವಾ 7 ವರ್ಷಗಳಿಗೊಮ್ಮೆ ನಡೆಯುವ ಅಷ್ಟ ಗ್ರಾಮಗಳ ಐತಿಹಾಸಿಕ ಮರಸೂರು ಮಡಿವಾಳದ ಬಂಡಿ ಮಹಾಕಾಳಮ್ಮ ಜಾತ್ರೆ ವಿಜೃಂಭಣೆಯಿಂದ ನೆರವೇರಿತು.
ಜಾತ್ರೆಯಲ್ಲಿ ಸುತ್ತಮುತ್ತಲ ಹಳ್ಳಿಗಳಿಂದ ಕುರ್ಜುಗಳನ್ನು (ತೇರು) ಹೊಲ- ಗದ್ದೆಗಳಲ್ಲಿ ಎತ್ತುಗಳ ಮೂಲಕ ಎಳೆದು ತರುವುದು ಇಲ್ಲಿನ ವಿಶೇಷ.
ಮಂಗಳ ವಾದ್ಯಗಳ ಸದ್ದು, ಸಾಲುಗಟ್ಟಿದ ಎತ್ತುಗಳು ಹೊಲಗದ್ದೆಗಳ ತಗ್ಗು, ದಿಬ್ಬಗಳನ್ನು ಲೆಕ್ಕಿಸದೆ ಆಕಾಶದೆತ್ತರದ ತೇರು ಎಳೆಯುವಾಗ ನೆರೆದಿದ್ದ ಜನಸ್ತೋಮ ಗೋವಿಂದ ನಾಮಸ್ಮರಣೆ ಮಾಡಿತು. ಜಾತ್ರೆಯಲ್ಲಿ ಮರಸೂರು, ಶೆಟ್ಟಿಹಳ್ಳಿ ಮತ್ತು ಹಳೇವೂರು ಗ್ರಾಮಗಳಿಂದ 80 ಅಡಿ ಎತ್ತರದ ಕುರ್ಜುಗಳನ್ನು ಗ್ರಾಮಸ್ಥರು ಎತ್ತುಗಳ ಸಹಾಯದಿಂದ ಗ್ರಾಮ ತಂದರು. ಕುರ್ಜು ಸಾಗುವ ದಾರಿಯುದ್ದಕ್ಕೂ ಮಜ್ಜಿಗೆ, ಪಾನಕ, ಕೋಸಂಬರಿ ಹಾಗೂ ನೀರಿನ ಬಾಟಲ್ ವ್ಯವಸ್ಥೆ ಮಾಡಲಾಗಿತ್ತು. ಕುರ್ಜುಗಳು ಸಾಗುತ್ತಿದ್ದ ಮೂರೂ ಕಡೆಗಳಲ್ಲಿ ಒಂದೊಂದು ಆಂಬುಲೆನ್ಸ್ ವ್ಯವಸ್ಥೆ ಮಾಡುವ ಮೂಲಕ ಸುರಕ್ಷತೆಗೂ ಆದ್ಯತೆ ನೀಡಲಾಗಿತ್ತು.
ಬಂಡಿ ಮಹಾಕಾಳಿ, ದುರ್ಗಿ, ಪಾರ್ವತಿ ದೇವಿಯ ಅಪತಾರವಾಗಿ ಇಲ್ಲಿ ಪೂಜಿಸಲ್ಪಡುತ್ತಾಳೆ. ಎತ್ತುಗಳು ಕುರ್ಜುಗಳನ್ನು ಎಳದು ತರುವಾಗ ಎಷ್ಟೇ ತಗ್ಗು-ದಿಣ್ಣೆಗಳಿದ್ದರೂ ಯಾರೋಬ್ಬರಿಗೂ ಒಂದು ಸಣ್ಣ ಸಮಸ್ಯೆಯೂ ಆಗದೆ ಸುರಕ್ಷಿತವಾಗಿ ದೇವಾಲಯದ ಬಳಿ ಬಂದು ಸೇರುತ್ತವೆ. ಇತ್ತೀಚಿಗೆ ಬಡಾವಣೆಗಳು ತಲೆ ಎತ್ತುತ್ತಿದ್ದರೂ ಕುರ್ಜು ದಾರಿಗೆ ಯಾವುದೇ ತೊಂದರೆ ಆಗದಂತೆ ಒಂದು ವಾರದ ಮುಂಚಿತವಾಗೇ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಹೊಲಗದ್ದೆಗಳಲ್ಲಿ ಬೆಳೆ ಇದ್ದರೂ ಬೆಳೆ ಮೇಲೆಯೇ ಕುರ್ಜು ಸಾಗುತ್ತವೆ.