ಮೈಸೂರು: ಇಲವಾಲ ಬಳಿಯ ಶ್ರೀ ಕ್ಷೇತ್ರ ಗೊಮ್ಮಟಗಿರಿಯಲ್ಲಿ ಮೂರು ದಿನಗಳ ಕಾಲ ಭಗವಾನ್ ಬಾಹುಬಲಿಗೆ ಹಮ್ಮಿಕೊಂಡಿದ್ದ ಮಹಾಮಸ್ತಕಾಭಿಷೇಕ ಭಾನುವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಕ್ಷೀರ, ಗಂಧ ಕಷಾಯ, ಎಳನೀರು, ರಕ್ತ ಚಂದನ, ಮಂಗಳ ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ ವೈಭವಪೇತವಾಗಿ ಜರುಗಿತು. ಕನಕಗಿರಿಯ ಶ್ರೀ ಭುವನ ಕೀರ್ತಿ ಸ್ವಾಮೀಜಿ ಹಾಗೂ ಹೊಂಬುಜದ ಶ್ರೀ ದೇವೇಂದ್ರ ಕೀರ್ತಿ ಸ್ವಾಮೀಜಿ ಅವರ ಮಾರ್ಗದರ್ಶನ ಆಶೀರ್ವದದಲ್ಲಿ ಪೂಜಾದಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಸಮಾರಂಭಕ್ಕೆ ಯಶಸ್ವಿಗೆ ಕಾರಣಕರ್ತರಾದ ಎಲ್ಲ ದಾನಿಗಳು, ಕಾರ್ಯಕರ್ತರು ಹಾಗೂ ಸಮಾಜದ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಬೃಹತ್ ಸಮವಸರಣ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಗೊಮ್ಮಟಗಿರಿ ಸಮಿತಿ ಅಧ್ಯಕ್ಷ ಮನ್ಮತ್‌ರಾಜ್ ನೆರವೇರಿಸಿದರು.
ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ಹಾಸನ, ತುಮಕೂರು ಭಾಗಗಳಿಂದ ಭಕ್ತಾದಿಗಳು ಆಗಮಿಸಿದ್ದರು. ಈ ಮೂರು ದಿನಗಳು ಜಾತ್ರೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಭೋಜನ ಮತ್ತು ಫಲಹಾರದ ವ್ಯವಸ್ಥೆ ಏರ್ಪಡಿಸಲಾಗಿತ್ತು.