ಜಿಲ್ಲೆ

ಜ.7 ರಂದು ‘ಮಹಾಮಾಯಿ’ ನಾಟಕ ಪ್ರದರ್ಶನ

ಅವಿನಾಶ್ ಜೈನಹಳ್ಳಿ

ಮೈಸೂರು: ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಜ.7ರ ಸಂಜೆ 6.30ಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರ ‘ಮಹಾಮಾಯಿ’ ನಾಟಕ ಪ್ರದರ್ಶನ ನಡೆಯಲಿದೆ.

ನಟನ ರಂಗಶಾಲೆಯ 2023-24ನೇ ಸಾಲಿನ ರಂಗಭೂಮಿ ಡಿಪ್ಲೊಮಾ ವಿದ್ಯಾರ್ಥಿಗಳ ಮೊದಲ ಅಭ್ಯಾಸಿ ಪ್ರಯೋಗ ಇದಾಗಿದೆ. ನಟನ ರಂಗಶಾಲೆಯ ಪ್ರಾಂಶುಪಾಲ ಮೇಘ ಸಮೀರ ನಾಟಕದ ಸಂಗೀತ, ವಿನ್ಯಾಸ ಮತ್ತು ನಿರ್ದೇಶನ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಮೃತ್ಯುದೇವತೆಯ ಮೇಲೆ ಮನುಷ್ಯ ವಿಜಯ ಸಾಧಿಸುವ ಕತೆ ಸಾಹಿತ್ಯದ ವಸ್ತುವಾಗಿದೆ.

ಈ ವಸ್ತುವಿಗೆ ಬಹಳ ಸಂಕೀರ್ಣವೂ, ನವೀನವೂ ಆದ ತಿರುವನ್ನು ಮಹಾಮಾಯಿ ನಾಟಕ ನೀಡಿದೆ. ಇದರಲ್ಲಿ ಪೂರ್ವ ನಿಗದಿತವಾದ ಸಾವು ಮುಟ್ಟದ ಹಾಗೆ ರಾಜಕುಮಾರಿಯನ್ನು ಕಾಪಾಡುವುದು ಕಥಾನಾಯಕನ ವೈದ್ಯಕೌಶಲವಲ್ಲ, ಪ್ರೇಮ. ಮಹಾಮಾಯಿಯ ನಿಜವಾದ ಮಹತ್ವವಿರುವುದು ಮನುಷ್ಯ ಸ್ಥಿತಿಯನ್ನು ನವೀನ ರೀತಿಯಲ್ಲಿ ಅನ್ವೇಷಿಸಿರುವುದರಲ್ಲಿ. ಅಂದರೆ, ಸ್ವಾತಂತ್ರ್ಯವನ್ನು ನಿರಾಕರಿಸುವ ಬಲಗಳು ನಿಯಂತ್ರಿಸುವ ಜಗತ್ತಿನಲ್ಲಿ ಬದುಕುವುದೆಂದರೆ ಹೇಗಿರುತ್ತದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ನಾಟಕದ ನಾಯಕನಾದ ಸಂಜೀವ ಒಬ್ಬ ತಬ್ಬಲಿಯಾಗಿ ಬದುಕನ್ನು ಆರಂಭಿಸುತ್ತಾನೆ. ದೇವರಿಲ್ಲದ ಜಗತ್ತಿನಲ್ಲಿ ಆರಂಭವಾಗುವ ಸಾಂಕೇತಿಕ ಬದುಕು ಇದು.

ಮೃತ್ಯು ದೇವತೆಯು ಅವನಿಗೆ ಸಂಕಟ ನಿವಾರಣೆಯ ಶಕ್ತಿಯನ್ನು ನೀಡುತ್ತಾಳಾದರೂ ಅವನಿಂದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಾಳೆ. ತನ್ನ ಬದುಕಿನಲ್ಲಿ ಇಲ್ಲವಾಗಿರುವುದು ಏನು ಎಂಬುದನ್ನು ಸಂಜೀವ ಅರ್ಥ ಮಾಡಿಕೊಳ್ಳುವುದು, ಪ್ರೇಮದ ಮಹತ್ವವನ್ನು ಶೋಧಿಸುವುದು ಮತ್ತು ಆಧ್ಯಾತ್ಮಿಕ ಚೈತನ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಇವೇ ಈ ನಾಟಕದ ತಿರುಳಾಗಿದೆ.