ಜಿಲ್ಲೆ

ಅ.19ರಂದು ನಗರದಲ್ಲಿ ಸಾಮಾಜಿಕ ಕಾರ್ಯಕ್ರಮ: ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಷನ್ ಸಂಘಟನಾ ಕಾರ್ಯದರ್ಶಿ ಜೆ.ಮೋಹನ್ ಮಾಹಿತಿ

ಮಂಡ್ಯ: ಬಸರಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಉದ್ಯಮಿ ಮಹಾಲಿಂಗೇಗೌಡ ಅವರು ಜನ್ಮದಿನದ ಅಂಗವಾಗಿ ಅ.19ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಲವು ಸಾಮಾಜಿಕ ಸೇವಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಷನ್ ಸಂಘಟನಾ ಕಾರ್ಯದರ್ಶಿ ಜೆ.ಮೋಹನ್ ಹೇಳಿದರು.

ಮಹಾಲಿಂಗೇಗೌಡ ಅವರ ಆಪ್ತರು, ಅಭಿಮಾನಿ ಬಳಗ, ಎಂ.ಆರ್.ಗ್ರೂಪ್ಸ್ ಚಾರಿಟಬಲ್ ಟ್ರಸ್ಟ್‌ನಿಂದ ಅಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಸಮಾಜಮುಖಿ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ವಿಶ್ರಾಂತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ, ಚಂದ್ರಶೇಖರಯ್ಯ, ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಗಡೆ, ಶಿವಮೊಗ್ಗದ ಕುವೆಂಪು ವಿವಿಯ ಉಪಕುಲಪತಿ ಶರತ್ ಆನಂದಮೂರ್ತಿ, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಿತ್ರ ನಿರ್ಮಾಪಕ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಂದು ರೈತರಿಗೆ 2,500 ತೆಂಗಿನ ಸಸಿ ವಿತರಣೆ, 50ಕ್ಕೂ ಹೆಚ್ಚು ಉದ್ಯೋಗ ಸಂಸ್ಥೆಗಳು ಒಳಗೊಂಡಂತೆ ಉದ್ಯೋಗ ಮೇಳ, 1000 ಹೆಲ್ಮೆಟ್ ವಿತರಣೆ, ಮಂಡ್ಯ ನಗರದ ಪಶ್ಚಿಮ ಠಾಣೆ ಪೊಲೀಸರಿಗೆ ಜರ್ಕಿನ್ ವಿತರಣೆ ಹಾಗೂ ಪ್ರಗತಿಪರ ಏಳು ಜನ ರೈತರಿಗೆ ಪ್ರಶಸಿ ಪ್ರದಾನ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಲಾ ಮೂವರು ವಿದ್ಯಾರ್ಥಿಗಳಿಗೆ ನಗದು ಸಹಿತ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ವಿವರಿಸಿದರು.

ಸಂಘಟನಾ ಕಾರ್ಯದರ್ಶಿ ಸಿ.ವಿಶ್ವ, ಖಜಾಂಚಿ ಬಿ.ಎಂ.ಶಶಿಕುಮಾರ್, ಟ್ರಸ್ಟಿಗಳಾದ ಅನಿಲ್, ಎಂ.ಸಿ.ಗೌತಮ್ ಇದ್ದರು.