ಜಿಲ್ಲೆ

ರನ್ನಬೆಳಗಲಿ ಪಟ್ಟಣ ಪಂಚಾಯಿತಿ ಚುನಾವಣೆ

ಮಹಾಲಿಂಗಪುರ: ಸಮೀಪದ ರನ್ನಬೆಳಗಲಿ ಪಟ್ಟಣ ಪಂಚಾಯಿತಿಗೆ ಪ್ರಕಟವಾದ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್‌ಸಿ (ಪರಿಶಿಷ್ಟ ಜಾತಿ) ಗೆ ದೊರೆತಿದೆ. ಬಿಜೆಪಿ 8, ಕಾಂಗ್ರೆಸ್5 , ರೈತ ಸಂಘ 3, ಪಕ್ಷೇತರ ಇಬ್ಬರು ಸೇರಿ 18 ಸದಸ್ಯರನ್ನು ಹೊಂದಿದೆ.

ಪಕ್ಷೇತರ, ರೈತ ಸಂಘ, ಬಿಜೆಪಿ ಸೇರಿ 13 ಸದಸ್ಯರ ಜತೆ ಸಂಸದ ಮತ್ತು ಶಾಸಕರ ಎರಡು ಮತಗಳೊಂದಿಗೆ 15 ಮತಗಳಿವೆ. ಬಿಜೆಪಿ ಸದಸ್ಯ, ಪಪಂ ಸ್ಥಾಯಿ ಸಮಿತಿ ಮಾಜಿ ಚೇರ್ಮನ್ ಸಿದ್ದುಗೌಡ ಪಾಟೀಲ ಹಾಗೂ ಬಿಜೆಪಿ ಸದಸ್ಯ ಮಹಾಲಿಂಗಪ್ಪ ಪುರಾಣಿಕ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಮೀಸಲಾತಿ ಇರುವುದರಿಂದ ರೈತ ಸಂಘದ ಇಂದಿರಾ ಚಾಂಬರ, ಬಿಜೆಪಿ ಸದಸ್ಯೆ ಮಹಾದೇವಿ ಸರಮನಿ ಸೇರಿ ಇಬ್ಬರು ಸದಸ್ಯೆಯರು ಸ್ಪರ್ಧೆಯಲ್ಲಿದ್ದಾರೆ. ಮಹಾದೇವಿ ಸರಮನಿ ಈಗಾಗಲೇ ಈ ಮೊದಲು ಅಧ್ಯಕ್ಷರಾಗಿದ್ದರಿಂದ ರೈತ ಸಂಘದ ಇಂದಿರಾ ಚಾಂಬರ ಉಪಾಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದೆ.

ಕಾರಜೋಳ ತೀರ್ಮಾನ ಅಂತಿಮ
ಮಹಾಲಿಂಗಪುರ ಮತ್ತು ಬೆಳಗಲಿ ಪಟ್ಟಣಗಳನ್ನು ರಾಜ್ಯದ ಡಿಸಿಎಂ ಗೋವಿಂದ ಕಾರಜೋಳ ಅವರು ತಮ್ಮ ತವರು ಮನೆಗಳೆಂದೇ ಹೇಳುತ್ತಿದ್ದರು. ಆದರೆ ಮಹಾಲಿಂಗಪುರ ತೇರದಾಳ ಮತಕ್ಷೇತ್ರದ ವ್ಯಾಪ್ತಿಗೆ ಬಂದ ನಂತರ ಬೆಳಗಲಿ ಮುಧೋಳ ಮತಕ್ಷೇತದಲ್ಲಿ ಉಳಿಯಿತು. ಬೆಳಗಲಿ ಎಂದರೆ ಕಾರಜೋಳರಿಗೆ ವಿಶೇಷವಾದ ಪ್ರೀತಿ. ಹೀಗಾಗಿ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿ ಕಾರಜೋಳ ಅವರ ತೀರ್ಮಾನವೇ ಅಂತಿಮವಾದರೂ ಪಕ್ಷದ ಕಾರ್ಯಕರ್ತರ ಆಸೆಯಂತೆಯೇ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.

EndFragment