ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯ ಆವರಣದಲ್ಲಿ ಭಾನುವಾರ ನೆರೆದಿದ್ದ ಭಕ್ತರು. 
ಜಿಲ್ಲೆ

ಮಾದಪ್ಪನ ಸನ್ನಿಧಿಯಲ್ಲಿ ಮಹಾಲಯ ಅಮಾವಾಸ್ಯೆ

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಭಾನುವಾರ ಮಹಾಲಯ ಅಮಾವಾಸ್ಯೆ ಅಂಗವಾಗಿ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದ್ದು, ಲಕ್ಷಾಂತರ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.

ಅಮಾವಾಸ್ಯೆಯ ಹಿನ್ನೆಲೆಯಲ್ಲಿ ದೇಗುಲವನ್ನು ವಿವಿಧ ಪುಷ್ಪ, ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ಗೋಪುರ ಹಾಗೂ ದೇಗುಲದ ಆವರಣವನ್ನು ವಿವಿಧ ವಿದ್ಯುತ್ ದೀಪದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಜಾವ 3.30ರಿಂದ 6.30ರವರೆಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸ್ವಾಮಿಗೆ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆ ನೆರವೇರಿಸಲಾಯಿತು.

ಮಹಾಲಯ ಅಮಾವಾಸ್ಯೆ ಪೂಜೆ: ಉಪವಾಸವಿದ್ದ ಬೇಡಗಂಪಣ ಸರದಿ ಅರ್ಚಕರು ಸತ್ತಿಗೆ, ಸೂರಿಪಾನಿ, ಛತ್ರಿ ಚಾಮರ ಹಾಗೂ ವಾದ್ಯಮೇಳದೊಂದಿಗೆ ದೇಗುಲ ಸಮೀಪದ ನಂದನವನದ ಮಜ್ಜನ ಬಾವಿಗೆ ತೆರಳಿ ಆಗ್ರೋದಕ ಹಾಗೂ ಬಾಯಿಗೆ ಬಟ್ಟೆ ಕಟ್ಟಿಕೊಂಡು ಕರೆದ ಹಾಲಿಗೆ ವಿಶೇಷ ಪೂಜೆ ಸಲ್ಲಿಸಿದರು. ಮೆರವಣಿಗೆಯ ಮೂಲಕ ದೇಗುಲಕ್ಕೆ ತಂದು ಸ್ವಾಮಿಗೆ ಸಂಕಲ್ಪಾಧಿ, ಪಂಚಕಳಸ ಸಮೇತ ನವರತ್ನ ಕಿರೀಟ ಧಾರಣೆ, ಏಕವಾರು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಶತನಾಮ ಬಿಲ್ವಾರ್ಚನೆ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿ ಹಾಗೂ ಹಾಲಿನ ಅಭಿಷೇಕ ನೆರವೇರಿಸಿದರು.

ಬಳಿಕ 2ನೇ ಅಭಿಷೇಕದ ವಿಶೇಷ ಪೂಜೆಯಲ್ಲಿ ಮಾದಪ್ಪನಿಗೆ ಅಭಿಷೇಕ ಅರ್ಚನೆ, ಏಕವಾರು ರುದ್ರಾಭಿಷೇಕ, ಸಂಕಲ್ಪ ಬಿಲ್ವಾರ್ಚನೆ, ನವರತ್ನ ಕೀರಿಟಧಾರಣೆಯೊಂದಿಗೆ ವಿವಿಧ ಪುಷ್ಪಗಳಿಂದ ಸಿಂಗರಿಸಲಾಯಿತು. ಧೂಪ ದೀಪದಾರತಿ, ಮಹಾ ಮಂಗಳಾರತಿ ಬೆಳಗಿಸಿ, ದೀವಟಿಕೆ ಸೇವೆ ಮೂಲಕ ಮಾದಪ್ಪನಿಗೆ ಮಹಾಲಯ ಅಮಾವಾಸ್ಯೆ ಪೂಜೆ ನೆರವೇರಿಸಲಾಯಿತು.

ಶೇಷಣ್ಣ ಗದ್ದುಗೆಗೂ ವಿಶೇಷ ಪೂಜೆ: ಇದೇ ವೇಳೆ ನಡುಗುಡಿಯ ಬಂಡಳ್ಳಿ ಬಸವ, ಬೇಡರಕಣ್ಣಪ್ಪ ಸ್ವಾಮಿ, ಶ್ರೀಕಾಳ ಹಸ್ತೇಶ್ವರಸ್ವಾಮಿ, ಗಾಳಿಬಸವೇಶ್ವರ ಸ್ವಾಮಿ, ಆಲಂಬಾಡಿ ಬಸವ, ಮಹಾಗಣಪತಿ ಹಾಗೂ ಕಾರಯ್ಯ, ಬಿಲ್ಲಯ್ಯ ಮೂರ್ತಿಗೂ ಪೂಜೆ ಸಲ್ಲಿಸಲಾಯಿತು. ಜತೆಗೆ ಅಂತರಗಂಗೆಯ ಬಳಿ ಇರುವ ಶೇಷಣ್ಣ ಒಡೆಯರ ಗದ್ದುಗೆಗೂ ವಿಶೇಷ ಅಭಿಷೇಕದ ಪೂಜಾ ಕೈಂಕರ್ಯ ನಡೆದವು.

ಹರಿದು ಬಂದ ಭಕ್ತರ ದಂಡು: ಮಹಾಲಯ ಅಮಾವಾಸ್ಯೆ ರಜಾ ದಿನವಾದ್ದರಿಂದ ಭಾನುವಾರ ಮ.ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬಂತು. ಹಾಗಾಗಿ ಶ್ರೀ ಕ್ಷೇತ್ರದಲ್ಲಿ ಎತ್ತ ನೋಡಿದರೂ ಭಕ್ತಗಣ ತುಂಬಿ ತುಳುಕುತ್ತಿತ್ತು. ಬಹುತೇಕ ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರೆ, ಇನ್ನು ಕೆಲ ಭಕ್ತರು 500 ರೂ. ಹಾಗೂ 250 ರೂ. ಟಿಕೆಟ್ ಪಡೆದು ರಾಜಗೋಪುರದ ವಿಶೇಷ ಕೌಂಟರ್ ಮೂಲಕ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಕೆಲ ಭಕ್ತರು ದೇಗುಲದ ಮುಂಭಾಗದಲ್ಲಿ ಗಂಧದಕಡ್ಡಿ, ಕರ್ಪೂರ ಹಚ್ಚಿ ಮಾದಪ್ಪನನ್ನು ನೆನೆದು ಕೈ ಮುಗಿದು ಪ್ರಾರ್ಥಿಸಿಕೊಂಡರು. ಇನ್ನು ಹರಕೆ ಹೊತ್ತ ಭಕ್ತರು ದೇಗುಲದ ಆವರಣದಲ್ಲಿ ಜರುಗಿದ ಬಸವ, ಹುಲಿ ಹಾಗೂ ರುದ್ರಾಕ್ಷಿ ವಾಹನ ಉತ್ಸವಾದಿ ಸೇವೆಗಳಲ್ಲಿ ಭಾಗಿಯಾಗಿದ್ದರು. ಈ ವೇಳೆ ಭಕ್ತರು ದಂಡಿನ ಕೋಲನ್ನು ಹೊತ್ತು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿದರು. ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಜಯಘೋಷ ಮೊಳಗಿಸುವುದರ ಮೂಲಕ ಭಕ್ತಿ ಭಾವ ಮೆರೆದರು. ಇನ್ನು ಎಂದಿನಂತೆ ಕೆಲವರು ಮುಡಿಸೇವೆ, ಪಂಜಿನ ಸೇವೆ, ರಜಾಸೇವೆ ನೆರವೇರಿಸುವ ಮೂಲಕ ಹರಕೆ ತೀರಿಸಿದರು.

ಚಾಮರಾಜನಗರ ಸೇರಿದಂತೆ ಮೈಸೂರು, ಬೆಂಗಳೂರು, ಬಿಡದಿ, ರಾಮನಗರ, ಕನಕಪುರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಹಾಗೂ ಮಂಡ್ಯ ಕಡೆಗಳಿಂದ ಹೆಚ್ಚಿನ ಭಕ್ತರು ಆಗಮಿಸಿದ್ದರು. ಇದರಲ್ಲಿ ಶಕ್ತಿ ಯೋಜನೆಯ ಪರಿಣಾಮ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಅವರ ನೇತೃತ್ವದಲ್ಲಿ ಭಕ್ತರಿಗೆ ನಿರಂತರ ದಾಸೋಹ, ಕುಡಿಯುವ ನೀರು, ಶೌಚಗೃಹ, ನೆರಳಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಒದಗಿಸಲಾಗಿತ್ತು. ಸಾರಿಗೆ ಇಲಾಖೆಯ ವತಿಯಿಂದ ಭಕ್ತರ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಒದಗಿಸಲಾಗಿತ್ತು. ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.