ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅಮ್ಮನವರ ವರ್ಧಂತಿ ಪ್ರಯುಕ್ತ ಕಲ್ಯಾಣನಾಯಕಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. 
ಜಿಲ್ಲೆ

ಮಹಾಲಕ್ಷ್ಮೀ ಯದುಗಿರಿನಾಯಕಿ ವರ್ಧಂತ್ಯುತ್ಸವ

ಮೇಲುಕೋಟೆ: ಮಹಾಲಕ್ಷ್ಮೀ ಯದುಗಿರಿನಾಯಕಿ ಅಮ್ಮನವರ ವರ್ಧಂತ್ಯುತ್ಸವ ಆ.7 ರಂದು ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ವೈಭವದಿಂದ ನಡೆಯಲಿದೆ.

ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಕಲ್ಯಾಣನಾಯಕಿ ಅಮ್ಮನವರಿಗೆ ಚಿಕ್ಕಶೇಷಾಲಂಕಾರದ ಉತ್ಸವ ವೈಭವದಿಂದ ನಡೆಯಿತು. ವರ್ಧಂತಿಯಂದು ವೇದ ನಾದ ದಿವ್ಯಪ್ರಬಂಧ ಪಾರಾಯಣಗಳ ವಿಶೇಷದೊಂದಿಗೆ ಕಲ್ಯಾಣನಾಯಕಿ ಅಮ್ಮನವರಿಗೆ ಬೆಳಗ್ಗೆ ಶೇಷವಾಹನೋತ್ಸವ, ರಾತ್ರಿ ಚೆಲುವನಾರಾಯಣಸ್ವಾಮಿಯವರೊಂದಿಗೆ ಬಂಗಾರದ ಪುಷ್ಪಪಲ್ಲಕ್ಕಿ ಉತ್ಸವ ನಡೆಯಲಿದೆ. ಶೇಷವಾಹನೋತ್ಸವದ ನಂತರ ಅಮ್ಮನವರಿಗೆ ಅಭಿಷೇಕ ಮಹಾಶಾತ್ತುಮೊರೈ ಕಾರ್ಯಕ್ರಮಗಳು ನಡೆಯಲಿವೆ.

ಶ್ರೀವೈಷ್ಣವ ದೇವತೆ ಆಂಡಾಳ್ ಅವತಾರದ ದಿನದ ಅಂಗವಾಗಿ ನಾಡಿನೆಲ್ಲೆಡೆ ತಿರುವಾಡಿಪ್ಪೂರಂ ನಡೆದರೆ ಚೆಲುವನಾರಾಯಣಸ್ವಾಮಿಯ ಸನ್ನಿಧಿಯಲ್ಲಿ ಆಂಡಾಳ್ ಅವತಾರ ಉತ್ಸವ ಅಮ್ಮನವರ ವರ್ಧಂತಿಯನ್ನಾಗಿ ಆಚರಿಸಲಾಗುತ್ತದೆ.

ಮಹೋತ್ಸವದ ಅಂಗವಾಗಿ ಅಮ್ಮನವರ ಸನ್ನಿಧಿಯ ಆವರಣವನ್ನು ತಳಿರು ತೋರಣ ಹಾಗೂ ವಿಶೇಷ ಪುಷ್ಪಗಳಿಂದ ಅಲಂಕಾರ ಮಾಡಲಾಗಿದೆ. ಮೂರನೇ ಸ್ಥಾನೀಕರಾದ ಕೋವಿಲ್ ನಂಬಿ ಮುಕುಂದನ್ ಹಾಗೂ ಪ್ರಸನ್ನ ಅವರು ವರ್ಧಂತಿ ಮಹೋತ್ಸವಕ್ಕೆ ವಿಶೇಷ ವ್ಯವಸ್ಥೆ ಮಾಡಿದ್ದಾರೆ.