ಜಿಲ್ಲೆ

ಡಿಸಿ ಕಚೇರಿ ಎದುರು ಮಹದೇಶ್ವರ ಕಾಲನಿ ನಿವಾಸಿಗಳ ಪ್ರತಿಭಟನೆ

ಹಾಸನ: ರಾಜ್ಯ ಸರ್ಕಾರ ನಡೆಸುತ್ತಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿರತರಾಗಿರುವ ಶಿಕ್ಷಕರು ಜಾತಿ ಕಾಲಂನಲ್ಲಿ ತಮಗೆ ಇಷ್ಟ ಬಂದ ಜಾತಿ ಹೆಸರು ನಮೂದಿಸಿ ಲೋಪ ಎಸಗಿದ್ದು, ಅಂಥವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ತಪ್ಪು ಸರಿಪಡಿಸಿ ಮೂಲ ಜಾತಿ ಮರು ನಮೂದಿಸಬೇಕೆಂದು ಡಿಸಿ ಕಚೇರಿ ಎದುರು ಬುಧವಾರ ಹೊಳೆನರಸೀಪುರ ಮಹದೇಶ್ವರ ಕಾಲನಿ ನಿವಾಸಿಗಳು ಪ್ರತಿಭಟನೆ ಮೂಲಕ ಒತ್ತಾಯಿಸಿದರು.

ಹಿಮ್ಸ್ ಆಡಳಿತ ಪರಿಷತ್ ಸದಸ್ಯ, ಕಾಂಗ್ರೆಸ್ ಯುವ ಮುಖಂಡ ರವೀಶ್ ಬಸವಾಪುರ ಮಾತನಾಡಿ, ಹಳ್ಳಿ ಮೈಸೂರು ಹೋಬಳಿ ತೇಜೂರು ಮಹದೇಶ್ವರ ಕಾಲನಿಯಲ್ಲಿ ಸುಮಾರು 135 ಮಾದಿಗ ಸಮುದಾಯದ ಕುಟುಂಬಗಳಿವೆ. ಗಣತಿ ಮಾಡಲು ಬಂದ ಶಿಕ್ಷಕಿಯರಾದ ಶುಭಾ ಮತ್ತು ಲಲಿತಾ ಎಂಬುವರು ಮನಸೋಇಚ್ಛೆ ಬರೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮಸ್ಥರು ಗಣತಿ ಜಾತಿ ಕಾಲಂನಲ್ಲಿ 061ರಲ್ಲಿ ಮಾದಿಗ ಎಂದು ನಮೂದಿಸುವಂತೆ ಕೇಳಿಕೊಂಡರೂ ಶುಭಾ, ಲಲಿತಾ ಅವರು, ಮಾದಿಗ ಎಂದು ಬರೆದಿಲ್ಲ. ಕೇಳಿದರೆ ನಾವು ಹಾಗೆ ಮಾಡಲಿಕ್ಕೆ ಬರಲ್ಲ. ನಮಗೆ ಆದಿದ್ರಾವಿಡ ಮತ್ತು ಆದಿಕರ್ನಾಟಕ ಎಂದು ಮಾತ್ರ ನಮೂದಿಸಲು ಸರ್ಕಾರದ ನಿರ್ದೇಶನವಿದೆ ಎಂದು ಉತ್ತರ ನೀಡಿದ್ದಾರೆ ಎಂದರು.

ಕೂಡಲೇ ಅವರನ್ನು ಅಮಾನತು ಮಾಡಬೇಕು. ಆಗಿರುವ ಲೋಪ ಸರಿಪಡಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಇಬ್ಬರು ಶಿಕ್ಷಕಿಯರಿಗೆ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿಸಿದರು. ಈ ವೇಳೆ ಇಂಟಕ್ ಜಿಲ್ಲಾಧ್ಯಕ್ಷ ರಾಮಚಂದ್ರ ಕಬ್ಬಳಿ, ಲೋಕೇಶ್ ಕ್ಯಾತನಹಳ್ಳಿ, ರಂಗಸ್ವಾಮಿ ಹಾಗೂ ನಿವಾಸಿಗಳಿದ್ದರು.