ಜಿಲ್ಲೆ

ಪರಿಹಾರಕ್ಕೆ ಅರ್ಜಿ ಆಹ್ವಾನ: ಮಹದಾಯಿ ನದಿ ಸಮಸ್ಯೆ ಹಿಂಸಾಚಾರ ಪ್ರಕರಣ

arunakunigal

ಬೆಂಗಳೂರು: ಮಹದಾಯಿ ನದಿ ಸಮಸ್ಯೆಗಳ ಹಿಂಸಾಚಾರದ ವೇಳೆ ಉಂಟಾಗಿರುವ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ನಷ್ಟಕ್ಕೆ ಪರಿಹಾರ ನೀಡಲು ಅರ್ಜಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಇಲಾಖೆ ಸೂಚಿಸಿದೆ.

2018ರ ಜ.25, ಫೆ.4 ಮತ್ತು ಏ.12ರಂದು ರಾಜ್ಯವ್ಯಾಪಿ ಮಹದಾಯಿ ನದಿ ಸಮಸ್ಯೆ ಕುರಿತು ಹೋರಾಟ ನಡೆಯಿತು. ಹಿಂಸಾಚಾರ ನಡೆದು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ನಷ್ಟ ಮತ್ತು ಹಾನಿ ಉಂಟಾಗಿತ್ತು. ಇದನ್ನು ಅಂದಾಜು ಮಾಡಲು ಹೈಕೋರ್ಟ್ ನಿರ್ದೇಶನದಂತೆ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಹಮ್ಮದ್​ ಗೌಸ್ ಮೊಹಿದ್ದೀನ್ ಪಾಟೀಲ್ ಅವರನ್ನು ಮಹದಾಯಿ ಹಕ್ಕು ಕಮಿಷನರ್‌ನ್ನಾಗಿ ನೇಮಕ ಮಾಡಲಾಗಿದೆ.

ಅದರಂತೆ ಧಾರವಾಡ ಕೆಲ್ಗೇರಿ ರಸ್ತೆ, ಕೃಷಿನಗರ, ಸಾಯಿಬಾಬಾ ದೇವಸ್ಥಾನ ಬಳಿಯ ಪ್ರಾಚಿಶಾಪ್ಪೆ ಕಟ್ಟಡ 1ನೇ ಮಹಡಿಯಲ್ಲಿ ನ್ಯಾ. ಮಹಮ್ಮದ್​ ಗೌಸ್ ಮೊಹಿದ್ದೀನ್ ಪಾಟೀಲ್ ಕಚೇರಿ ತೆರೆಯಲಾಗಿದೆ. 2020ರ ಆ.24ರಂದು ಅಧಿಕಾರ ಸ್ವೀಕರಿಸಿದ್ದಾರೆ. ಸಾರ್ವಜನಿಕರ ಮತ್ತು ಖಾಸಗಿ ಆಸ್ತಿಗಳಿಗೆ ನಷ್ಟ ಪರಿಹಾರ ಕೋರಿ ಅರ್ಜಿಗಳನ್ನು ನ್ಯಾಯಾಧೀಶರ ಕಚೇರಿಗೆ ಸಲ್ಲಿಸಬಹುದು. ಅಥವಾ ಇ-ಮೇಲ್ mahadayicc22@gmail.com ಮೂಲಕವೇ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.