ಜಿಲ್ಲೆ

ಮಹಾವೇದಿಕೆಯಿಂದ 10ರಂದು ಪ್ರತಿಭಟನೆ,  ಮಹದಾಯಿ ಯೋಜನೆಗಾಗಿ ಒಂದಾದ ರೈತ ಸಂಘಟನೆಗಳು

Dharwada - Basavaraj Idli

ಹುಬ್ಬಳ್ಳಿ: ಕಳೆದ ಹತ್ತಾರು ವರ್ಷಗಳಿಂದ ಸುಮ್ಮನಿದ್ದು, ಇದೀಗ ಒಂದು ಹಂತಕ್ಕೆ ಬಂದಿರುವ ಮಹದಾಯಿ ಯೋಜನೆ ಬಗ್ಗೆ ಕೆಲ ಪರಿಸರವಾದಿಗಳು ತಗಾದೆ ತೆಗೆದಿರುವುದು ಖಂಡನೀಯ ಎಂದು ಮಹದಾಯಿಗಾಗಿ ಮಹಾವೇದಿಕೆ ಪದಾಧಿಕಾರಿಗಳು ಹೇಳಿದ್ದಾರೆ.

ವೇದಿಕೆ ವತಿಯಿಂದ ನಗರದಲ್ಲಿ ಸಭೆ ನಡೆಸಿದ ಪದಾಧಿಕಾರಿಗಳು ಜೂನ್ 10ರಂದು ಧಾರವಾಡ ಜಿಲ್ಲೆಯಲ್ಲಿ ಯೋಜನೆ ವಿರೋಧಿಗಳ ಕ್ರಮ ಖಂಡಿಸಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಧಾರವಾಡ ಜಿಲ್ಲೆಯ ಪ್ರಗತಿಪರ ಮತ್ತು ಕನ್ನಡ ಪರ ಹಾಗೂ ಮಹಿಳಾ ಸಂಘಟನೆಗಳು, ಕಾರ್ಮಿಕರು, ಡಿಎಸ್ಎಸ್ ಸಂಟನೆಗಳ ಸಂಯುಕ್ತಾಶ್ರಯದಲ್ಲಿ ಹೋರಾಟ ನಡೆಯಲಿದೆ ಎಂದು ರೈತ ಸೇನಾ ರಾಜ್ಯಾಧ್ಯಕ್ಷ ಶಂಕರ ಅಂಬಲಿ ತಿಳಿಸಿದ್ದಾರೆ.

ಮಹದಾಯಿ ಯೋಜನೆ ಜಾರಿಗೊಳಿಸಿದರೆ ಪರಿಸರ ಹಾನಿಯಾಗುತ್ತದೆಂದು ಸರ್ಕಾರಕ್ಕೆ ಕೆಲ ಪರಿಸರವಾದಿಗಳು ಬೆಳಗಾವಿಯಲ್ಲಿ ಮನವಿ ಸಲ್ಲಿಸಿದ್ದಾರೆ. ಆದರೆ, ಈಗಾಗಲೇ ಸರ್ಕಾರ ಯೋಜನೆಗೆ ಸೂಕ್ತ ಅನುದಾನ ನಿಗದಿಗೊಳಿಸಿ ಆಡಳಿತಾತ್ಮಕ ಅನುಮತಿ ಹಾಗೂ ನ್ಯಾಯಾಧೀಕರಣದ ನಿರ್ಣಯಗಳು ಆಗಿವೆ.

ಕೇಂದ್ರದ ಪರಿಸರ ಮತ್ತು ವನ್ಯಜಿವಿ ಸಂರಕ್ಷಣೆ ಮಂಡಳಿಗಳ ಅನುಮತಿಗಾಗಿ ಕಾಯುತ್ತಿದೆ. ಇಂತಹ ಸಂದರ್ಭದಲ್ಲಿ ಪರಿಸರವಾದಿಗಳು ಎದ್ದು ಕುಳಿತಿರುವುದು ಆಶ್ಚರ್ಯದ ಸಂಗತಿಯಾಗಿದೆ.
ಇದುವರೆಗೆ ಕಣ್ಣುಮುಚ್ಚಿದ್ದ ಇವರು ಈಗ ರಾಜಕೀಯ ಪಿತೂರಿಯಿಂದ ಎದ್ದು ಕುಳಿತಿದ್ದಾರೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವೇಳೆ ಮಹದಾಯಿ ಯೋಜನೆ ವಿರೋಧಿಸಿದರೆ, ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಲಿದೆ. ಕುಡಿಯುವ ನೀರಿನ ಯೋಜನೆ ವಿರೋಧಿಸುವುದು ಸರಿಯಾದ ಕ್ರಮವಲ್ಲ.

ಮಹದಾಯಿ ಯೋಜನೆ ಜಾರಿಯಾಗಲೇಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜೂನ್ 10ರಂದು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗುವುದು. ಯೋಜನೆ ವ್ಯಾಪ್ತಿಯ ಸಂಘ ಸಂಸ್ಥೆಗಳು, ಹೋರಾಟಗಾರರು ಸಹಕರಿಸಬೇಕೆಂದು ಮಹಾವೇದಿಕೆ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಕಾಶ ದೊಡವಾಡ, ಲಕ್ಷ್ಮಣ ಬಕ್ಕಾಯಿ, ರಘುನಾಥ ನಡುವಿನಮನಿ, ನಿಂಗಪ್ಪ ದಿವಟಗಿ, ಸಲೀಮ ಸಂಗನಮಲ್ಲಾ, ಬಾಲಚಂದ್ರ ಸುರಪುರ, ಸಿದ್ರಾಮಯ್ಯ ಮರಸಂಗಯ್ಯನವರ, ದೇವೇಂದ್ರ ಗುಡಿಸಾಗರ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.