ಅರಸೀಕೆರೆ (ಗ್ರಾಮಾಂತರ) ತಾಲೂಕಿನ ಕಸಬಾ ಹೋಬಳಿಯ ಹಾರನಹಳ್ಳಿ ಸಮೀಪದ ಯಾಳವಾರೆ ಗ್ರಾಮದ ಶ್ರೀ ಹುಚ್ಚಮ್ಮ ದೇವಿ ದೇಗುಲ ಆವರಣದಲ್ಲಿ ಮಹಾ ಚಂಡಿಕಾ ಹೋಮ ನೆರವೇರಿತು. ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರ‌್ನಹಳ್ಳಿ ದಂಪತಿ, ವೇದಬಹ್ಮ ಶ್ರೀ ಕೃಷ್ಣ ಮೂರ್ತಿ ಘನಫಾಠಿ ಇತರರು ಇದ್ದರು.  
ಜಿಲ್ಲೆ

ಯಳವಾರೆಯಲ್ಲಿ ಮಹಾಚಂಡಿಕಾ ಹೋಮ

ವಸಂತಕುಮಾರ್ ಬಿ

 ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಸಬಾ ಹೋಬಳಿಯ ಯಳವಾರೆಯ ಗ್ರಾಮದೇವತೆ ಶ್ರೀ ಹುಚ್ಚಮ್ಮ ದೇವಿ ದೇಗುಲ ಆವರಣದಲ್ಲಿ ಭಾನುವಾರ ಲೋಕ ಕಲ್ಯಾಣಾರ್ಥ ಮಹಾಚಂಡಿಕಾ ಹೋಮ ನಡೆಸಲಾಯಿತು.

ಯಾದಾಪುರದ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ, ಯಳವಾರೆ ಶ್ರೀಹುಚ್ಚಮ್ಮ ದೇವಿ, ಶ್ರೀ ಚೆಲುರಾಯಸ್ವಾಮಿ, ಶ್ರೀ ದೂತರಾಯಸ್ವಾಮಿ, ಹಾರನಹಳ್ಳಿ ಗ್ರಾಮ ದೇವತೆ ಶ್ರೀ ಕೊಡಮ್ಮ ದೇವಿ, ಶ್ರೀ ಧೂತರಾಯ ಸ್ವಾಮಿ ಸಾನ್ನಿಧ್ಯದಲ್ಲಿ ಚಂಡಿಕಾ ಹೋಮ ನೆರವೇರಿತು.

ಬೆಳಗ್ಗೆ 7.30ಕ್ಕೆ ಸಂಕಲ್ಪ ಗಣಪತಿ ಪೂಜೆ, ಪುಣ್ಯಾಹ, ಹುಚ್ಚಮ್ಮ ಚೌಡಮ್ಮ ದೇವಿ ಸನ್ನಿಧಿಯಲ್ಲಿ ಅಮ್ಮನವರಿಗೆ ಅಭಿಷೇಕ ಕಳಸ ಸ್ಥಾಪನೆ, ಮಂಡಲ ರಚನೆ, ಅರ್ಚನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಮಂಗಳ ದ್ರವ್ಯಗಳೊಂದಿಗೆ ಚಂಡಿಕಾ ಹೋಮದ ಮಹಾಪೂರ್ಣಾಹುತಿ ನಡೆಯಿತು. ಸುಮಂಗಲಿ ಪೂಜೆ ಆರತಿ ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆದವು. ಹಾಸನದ ವೇದ ಬ್ರಹ್ಮಶ್ರೀ ಎಂ.ವಿ.ಕೃಷ್ಣಮೂರ್ತಿ ಘನಪಾಠಿಗಳ ಆಚಾರ್ಯತ್ವದಲ್ಲಿ ಚಂಡಿಕಾ ಹೋಮ ನಡೆಯಿತು.

ಯಳವಾರೆ ಹುಚ್ಚಮ್ಮ ದೇವಿ ಸಮಿತಿ ಟ್ರಸ್ಟ್ ವತಿಯಿಂದ ಹೋಮ ನೆರವೇರಿಸಲಾಯಿತು. ಇದೇ ವೇಳೆ ಶ್ರೀ ಚೆಲುವರಾಯಸ್ವಾಮಿ ಹಾರನಹಳ್ಳಿ ದೂತರಾಯ ಸ್ವಾಮಿ ದೇವರುಗಳ ಪ್ರಕಾರ ಉತ್ಸವ, ಸೋಮನ ಕುಣಿತ ನಡೆಯಿತು. ಅರೆವಾದ್ಯ, ಕರಡೆ ವಾದ್ಯ ಉತ್ಸವಕ್ಕೆ ಮೆರುಗು ನೀಡಿದವು. ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ್ ಹಾರ‌್ನಹಳ್ಳಿ, ಹುಚ್ಚಮ್ಮ ದೇವಿ ಟ್ರಸ್ಟ್ ನಿರ್ದೇಶಕರು, ಇತರರು ಇದ್ದರು. ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.