ಜಿಲ್ಲೆ

ಸನಾತನ ಧರ್ಮ ಮಾಡಿಲ್ಲ ಯಾವುದೇ ತಾರತಮ್ಯ...

ಬ್ರಹ್ಮಾನಂದ ಸರಸ್ವತಿ ಶ್ರೀ ಆಶೀರ್ವಚನ

ಮಹಾಭಿವಂದ್ಯ ಗೌರವಾರ್ಪಣೆ ಸ್ವೀಕಾರ

ವಿಜಯವಾಣಿ ಸುದ್ದಿಜಾಲ ಉಡುಪಿ

ಹೃದಯದಲ್ಲಿ ಅರಳುವ ಸದ್ಭಾವನೆಯೇ ಸಾಕ್ಷಾತ್​ ದೇವರಾಗಿದೆ. ಎಲ್ಲರ ಆತ್ಮವೂ ಪವಿತ್ರವಾಗಿದ್ದು ಬಡವ, ಶ್ರೀಮಂತ, ಮೇಲ್ಜಾತಿ, ಕೀಳು ಜಾತಿ ಎಂಬ ಭೇದ-ಭಾವ ಮಾಡಬಾರದು. ಪವಿತ್ರತೆಯ ವಿಕಸನವೇ ಅಧ್ಯಾತ್ಮವಾಗಿದೆ. ಧರ್ಮವೂ ಸಹ ಅದನ್ನೇ ಬಯಸುತ್ತದೆ. ಈ ವಿಚಾರವಾಗಿ ಸನಾತನ ಧರ್ಮ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಉಡುಪಿ ಬನ್ನಂಜೆಯ ನಾರಾಯಣಗುರು ಆಡಿಟೋರಿಯಂನಲ್ಲಿ ಆತ್ಮಾನಂದ ಸರಸ್ವತಿ ಕಿರಿಯ ತಾಂತ್ರಿಕ ಮಹಾವಿದ್ಯಾಲಯ ಬಿಲ್ಲಾಡಿ, ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಉಡುಪಿ ಸಮಿತಿ ಎಜುಕೇಷನಲ್​ ಟ್ರಸ್ಟ್​ ಉಡುಪಿ ಹಾಗೂ ಯುವವಾಹಿನಿ ಉಡುಪಿ ಘಟಕ ಮಾ.16ರಂದು ಸಂಜೆ ಆಯೋಜಿಸಿದ್ದ ಮಹಾಭಿವಂದ್ಯ ಕಾರ್ಯಕ್ರಮದಲ್ಲಿ ಗೌರವ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ದೇಶಕ್ಕೇ ಮಾದರಿ

ಅಭಿನಂದನಾರ್ಪಣೆ ಮಾಡಿದ ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಮಾತನಾಡಿ, ಸಮಾಜದ ಎಲ್ಲರೂ ಚೆನ್ನಾಗಿ ಬದುಕು ಸಾಗಿಸಬೇಕು ಎನ್ನುವುದು ಶ್ರೀಗಳ ಕಲ್ಪನೆ ಮತ್ತು ಆಶಯವಾಗಿದೆ. ದೇಶದ ಇತಿಹಾಸದಲ್ಲಿಯೇ ಶ್ರೀಗಳ ಧರ್ಮ ನಿಷ್ಠೆ, ಅದಕ್ಕೆ ಪೂರಕವಾದ ಕೆಲಸಗಳು ಮಾದರಿಯಾಗಿದೆ. ಮಹಾಮಂಡಲೇಶ್ವರ ಪದವಿಗೆ ಪಾತ್ರರಾಗುವುದು ದೊಡ್ಡ ಸಾಧನೆಯಾಗಿದೆ ಎಂದರು.

ಒಗ್ಗಟ್ಟು ಅಗತ್ಯ

ಕಾರ್ಯಕ್ರಮ ಉದ್ಘಾಟಿಸಿದ ಡಾ. ಜಿ.ಶಂಕರ ಫ್ಯಾಮಿಲಿ ಟ್ರಸ್ಟ್​ನ ಪ್ರವರ್ತಕ ನಾಡೋಜ ಡಾ. ಜಿ.ಶಂಕರ ಮಾತನಾಡಿ, ಸಮಾಜ ಎಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಉಂಟಾಗುವುದು ಸಹಜ. ಆದರೆ, ಅದ್ಯಾವುದನ್ನೂ ದೊಡ್ಡದು ಮಾಡದೆ ಅಥವಾ ಅದನ್ನು ತೋರ್ಪಡಿಸದೆ ಒಗ್ಗಟ್ಟು ಸಾಧಿಸಬೇಕು. ಬಿಲ್ಲವರು-ಮೊಗವೀರರು ಸಹಿತ ಎಲ್ಲ ಜಾತಿಯವರೂ ಕೆಟ್ಟ ರಾಜಕೀಯದಿಂದ ದೂರವಿದ್ದು ಒಂದಾಗಿ ಬದುಕಬೇಕು. ಶ್ರೀಗಳ ಮಾರ್ಗದರ್ಶನದಲ್ಲಿ ಎಲ್ಲ ಸಮುದಾಯದವರೂ ಸಹೋದರ ಭಾವದಿಂದ ಮುನ್ನಡೆಯಬೇಕು ಎಂದರು.

ಆತ್ಮಾನಂದ ಸರಸ್ವತಿ ಕಿರಿಯ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಓಬು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಯಶ್​ಪಾಲ್​ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ ಆರ್​., ಉದ್ಯಮಿ ಪ್ರಸಾದರಾಜ್​ ಕಾಂಚನ್​ ಉಪಸ್ಥಿತರಿದ್ದರು.

ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ದಯಾನಂದ ಕರ್ಕೇರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತೇಜಸ್​ ಜೆ. ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಧರ್ಮಸ್ಥಳ ಶ್ರೀರಾಮಕ್ಷೇತ್ರ ಉಡುಪಿ ಸಮಿತಿ ಎಜುಕೇಷನಲ್​ ಟ್ರಸ್ಟ್​ನ ಕಾರ್ಯದರ್ಶಿ ಭಾಸ್ಕರ ಸುವರ್ಣ ವಂದಿಸಿದರು.

ಸಮಾಜದಲ್ಲಿ ವೈಮನಸ್ಸು, ದ್ವೇಷಭಾವ ಸಲ್ಲ

ಇಂದಿನ ಶಿಕ್ಷಣ ವ್ಯವಸ್ಥೆ ಐಎಎಸ್​, ಐಪಿಎಸ್​, ಡಾಕ್ಟರ್​, ಇಂಜಿನಿಯರ್​ ಆಗಲು ಸೀಮಿತವಾಗಿದೆ. ಪ್ರಾಮಾಣಿಕರಾಗುವ ಪಠ್ಯ ಶಿಕ್ಷಣ ಕಾಣುತ್ತಿಲ್ಲ. ಹೀಗಾಗಿ ಬದುಕಿನ ಕ್ಷಣಗಳನ್ನೇ ಪಾಠಶಾಲೆಯನ್ನಾಗಿ ಮಾಡಿಕೊಳ್ಳಬೇಕಿದೆ. ಧರ್ಮದ ಅಂತರಾಳದಲ್ಲಿ ಮಾತ್ರ ನೈಜ ಸುಖವಿದೆ. ಆದರೆ, ಭಗವಂತನ ಕುರಿತು ಪೂರ್ಣ ಹಾಗೂ ನೈಜ ಭಕ್ತಿ ಇಲ್ಲದ್ದರಿಂದ ಸುಖ ಸಿಗುತ್ತಿಲ್ಲ. ದ್ವೇಷ ಮನೋಭಾವ ಒಳ್ಳೆಯದಲ್ಲ. ನಮ್ಮೆಲ್ಲರ ಶರೀರವೇ ಸಮಾಜ ಇದ್ದ ಹಾಗೆ. ದೇಹಕ್ಕೆ ಪೆಟ್ಟಾದಾಗ ನೋವಾಗುವಂತೆ ಸಮಾಜದಲ್ಲಿ ವೈಮನಸ್ಸು ಉಂಟಾದರೆ ಜನರಿಗೇ ತೊಂದರೆ. ಹೀಗಾಗಿ ಜಾತಿ-ಧರ್ಮ, ಆ ಪಕ್ಷ ಈ ಪಕ್ಷ ಎಂಬ ಮನೋಭಾವ ಬಿಟ್ಟು ಒಗ್ಗಟ್ಟಿನೊಂದಿಗೆ ರಾಷ್ಟ್ರೀಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬ್ರಹ್ಮಾನಂದ ಶ್ರೀ ಕರೆಯಿತ್ತರು.
ಬ್ರಹ್ಮಾನಂದ ಶ್ರೀಗಳ ನಿಸ್ವಾರ್ಥ ಕಾರ್ಯಕ್ಕಾಗಿ ಮಹಾಮಂಡಲೇಶ್ವರ ಪದವಿ ಲಭಿಸಿದೆ. ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮೇಲು-ಕೀಳೆಂಬ ಭಾವವಿಲ್ಲದೆ ಹಿಂದು ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದಾರೆ. ಹಿಂದು ಸಮಾಜಕ್ಕೆ ಶ್ರೀಗಳ ನೇತೃತ್ವ ಸಿಗುವಂತಾಗಲೆಂದು ಆಶಿಸುತ್ತೇನೆ. | ಕೆ.ರಘುಪತಿ ಭಟ್​. ಮಾಜಿ ಶಾಸಕ