ಜಿಲ್ಲೆ

ಚಾಮುಂಡಿಬೆಟ್ಟದ ನಂದಿಗೆ ವಿಜೃಂಭಣೆಯ ಮಹಾಭಿಷೇಕ

ಮೈಸೂರು: ಕಾರ್ತಿಕ ಮಾಸದ ಅಂಗವಾಗಿ ಚಾಮುಂಡಿಬೆಟ್ಟದ ನಂದಿ ವಿಗ್ರಹಕ್ಕೆ ಭಾನುವಾರ ವಿಜೃಂಭಣೆಯಿಂದ ಮಹಾಭಿಷೇಕ ನೆರವೇರಿತು.
ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್‌ನಿಂದ 18 ವರ್ಷಗಳಿಂದ ಮಹಾಭಿಷೇಕ ಹಾಗೂ ಪೂಜಾ ಮಹೋತ್ಸವ ನಡೆಸಿಕೊಂಡು ಬರುತ್ತಿದ್ದು, ಈ ವರ್ಷವೂ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಮಹಾಭಿಷೇಕ ನೆರವೇರಿತು.
ಕಾರ್ಯಕ್ರಮದ ಪ್ರಯುಕ್ತ ನಂದಿ ವಿಗ್ರಹಕ್ಕೆ ಮುಂಜಾನೆಯಿಂದಲೇ ವಿವಿಧ ಪೂಜೆ ಸಲ್ಲಿಸಲಾಯಿತು. ಬಳಿಕ ಮಹಾಭಿಷೇಕಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಚಾಲನೆ ನೀಡಿದರು.
36 ಬಗೆಯ ದ್ರವ್ಯಗಳಿಂದ ಅಭಿಷೇಕ:
ನಂದಿ ವಿಗ್ರಹಕ್ಕೆ ವಿವಿಧ ಬಗೆಯ ಒಟ್ಟು 36 ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ಬೃಹತ್ ನಂದಿಗೆ ಕನಕಾಭಿಷೇಕ, ರುದ್ರಾಭಿಷೇಕದ ಜತೆಗೆ ದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು. ಕ್ಷೀರಾಭಿಷೇಕ, ಗಂಧಾಭಿಷೇಕ, ಕುಂಕುಮಾಭಿಷೇಕ, ಅರಿಶಿಣ ಅಭಿಷೇಕ ಅಲ್ಲದೆ, ನಾನಾ ಬಗೆಯ ಹಣ್ಣು, ಹಾಲು, ಚಂದನ, ಶ್ರೀಗಂಧ, ಬಿಲ್ವಪತ್ರೆ, ಕರ್ಜೂರ, ಕೊಬ್ಬರಿ ಅಭಿಷೇಕ ನೆರವೇರಿಸಿದ ಬಳಿಕ ಕೊನೆಯಲ್ಲಿ ಜಲಾಭಿಷೇಕದೊಡನೆ ಮಹಾಭಿಷೇಕವನ್ನು ಸಮಾಪ್ತಿಗೊಳಿಸಲಾಯಿತು.
ಪೂಜಾಕೈಂಕರ್ಯ ಹಾಗೂ ಮಹಾಮಂಗಳಾರತಿ ನೆರವೇರಿದ ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಬೆಟ್ಟದ ಬಳಗ ಟ್ರಸ್ಟ್ ಅಧ್ಯಕ್ಷ ಪ್ರಕಾಶನ್ ಮಾತನಾಡಿ, ಮೈಸೂರು ಮಹಾರಾಜರ ಆಳ್ವಿಕೆ ಸಂದರ್ಭದಲ್ಲಿ ಈ ಅಭಿಷೇಕ ನಡೆಸಲಾಗುತ್ತಿತ್ತು. ನಂತರದಲ್ಲಿ ಈ ಸಂಪ್ರದಾಯ ನಿಂತುಹೋಗಿತ್ತು. ಆದರೆ ಬೆಟ್ಟದ ಬಳಗದಿಂದ ಮಹಾಭಿಷೇಕ ಕಾರ್ಯವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಪೂಜೆ ಆರಂಭಕ್ಕೂ ಮುನ್ನ ಯದುವಂಶದ ಹೆಸರಿನಲ್ಲಿ ಸಂಕಲ್ಪವನ್ನು ಕೂಡ ಮಾಡಲಾಗುತ್ತದೆ. ಈ ರೀತಿಯ ಅಭಿಷೇಕ ಮಾಡುವುದರಿಂದ ಏಕಶಿಲೆಯಲ್ಲಿ ನಿರ್ಮಿಸಿರುವ ನಂದಿ ವಿಗ್ರಹದ ಸಂರಕ್ಷಣೆಗೆ ಸಹಕಾರಿಯಾಗುತ್ತದೆ. ದೇಶದ ಮೂರನೇ ಅತಿದೊಡ್ಡ ನಂದಿ ಪ್ರತಿಮೆಯನ್ನು 17ನೇ ಶತಮಾನದಲ್ಲಿ ಮೈಸೂರು ದೊರೆ ದೊಡ್ಡ ದೇವರಾಜ ಒಡೆಯರ್ ಸ್ಥಾಪಿಸಿದರೆಂದು ನಂಬಲಾಗಿದೆ ಎಂದು ತಿಳಿಸಿದರು.
ಕಾರ್ಯದರ್ಶಿ ಗೋವಿಂದ ಸೇರಿದಂತೆ ಬೆಟ್ಟದ ಬಳಗ ಟ್ರಸ್ಟ್‌ನ ಇತರರು ಇದ್ದರು.