ಜಿಲ್ಲೆ

ಮಹಾಭಾರತ, ರಾಮಾಯಣ ಭಾರತೀಯರ ಪಾಲಿನ ಮಹಾನ್ ಕಾವ್ಯಗಳು

ಕಡೂರು: ಸಮೃದ್ಧ ಮಾನವೀಯ ಮೌಲ್ಯಗಳ ಮಹಾ ಪರ್ವವಾಗಿದ್ದ

ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾ ಮಂಜರಿ ಕಾವ್ಯದ ನಿರರ್ಗಳತೆಗೆ

ಮಹಾನ್‌ಕಾವ್ಯ ಸಾಕ್ಷಿಯಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್

ಹೇಳಿದರು.

ತಾಲೂಕಿನ ಯಗಟಿ ಗ್ರಾಮದಲ್ಲಿ ಗದುಗಿನ ವೀರನಾರಾಯಣ ಸ್ವಾಮಿ ದೇವಸ್ಥಾನ

ಟ್ರಸ್ಟ್ ನಿಂದ ಏರ್ಪಡಿಸಿದ್ದ ಕುಮಾರವ್ಯಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ,

ಮಹಾಭಾರತ ಮತ್ತು ರಾಮಾಯಣ ಎರಡೂ ಮಹಾಕಾವ್ಯಗಳು ಭಾರತೀಯರ

ಪಾಲಿಗೆ ಮಹಾನ್ ಕಾವ್ಯಗಳಾಗಿ ರೂಪುಗೊಂಡಿವೆ. ಮಹಾ ಭಾರತದ ಕಾವ್ಯಗಳನ್ನು

ಬಹಳಷ್ಟು ಕವಿಗಳು ತಮ್ಮದೇ ದೃಷ್ಟಿಕೋನದಡಿ ರಚಿಸಿದ್ದಾರೆ. ಅದರಲ್ಲೂ

ಕುಮಾರವ್ಯಾಸನ ವರ್ಣನಾ ಶೈಲಿ ವರ್ಣನಾತೀತವಾಗಿದೆ. ಅವರ ವಂಶಸ್ಥರು ಪ್ರತಿ

ವರ್ಷವೂ ಜಯಂತಿ ಕಾರ್ಯಕ್ರಮವಾಗಿ ಕಾವ್ಯದ ಮಹತ್ವ ಸಾರುತ್ತಿರುವುದು

ಶ್ಲಾಘನೀಯ ಎಂದರು.

ಕುಮಾರವ್ಯಾಸನ ಕಥಾ ಮಂಜರಿಯಲ್ಲಿ ಮಾನವ ಸಹಜ ಗುಣ ದೋಷಗಳಿಂದ

ಕೂಡಿದ ಪಾತ್ರಗಳು ಜನಸಾಮಾನ್ಯರಿಗೆ ಹತ್ತಿರವಾಗಿದ್ದವು. ಮಾನವೀಯ ಮೌಲ್ಯಗಳ

ಅಡಕವಾಗಿರುವ ಕಾವ್ಯದಲ್ಲಿ ಶ್ರೀಕೃಷ್ಣನೇ ನಾಯಕನಾಗಿದ್ದನು. ಕಾವ್ಯದ ಮೂಲಕ

ಯುದ್ದ ಪಾತ್ರಗಳ ನಿರ್ವಹಿಸುವಿಕೆ, ಉದ್ಭವಿಸುವ ಪಾತ್ರಗಳ ಸನ್ನಿವೇಶದ ಚಿತ್ರಣ

ಕಟ್ಟಿಕೊಡುವ ಪರಿ ಅನನ್ಯ. ಧರ್ಮ ಸಂಸ್ಥಾಪನೆಯೇ ಇದರ ಮೂಲ ಉದ್ದೇಶವಾಗಿದೆ

ಎಂದರು.

ಮಾಜಿ ಶಾಸಕ ವೈಎಸ್‌ವಿ ದತ್ತ ಮಾತನಾಡಿ, ಮಹಾಕವಿ ಕುಮಾರವ್ಯಾಸ ಬರೆದ

ಕಾವ್ಯಕ್ಕೆ 575 ವರ್ಷಗಳು ಕಳೆದಿವೆ. ಇದರ ಜತೆಗೆ ಭಾರತ ಗಣರಾಜ್ಯವಾಗಿ 75

ವರ್ಷಾಚರಣೆ ಆಗಿರುವುದು ಯೋಗಾಯೋಗವೇ ಆಗಿದೆ. ಜಗತ್ತಿನಲ್ಲಿ ಯಾವುದೂ

ಹೊಸತಿಲ್ಲ. ಬದುಕಿನ ಸಮಗ್ರ ಚಿತ್ರಣದ ಸಾರಾಂಶ ಸಾರುವ ಕುಮಾರವ್ಯಾಸನ

ಕರ್ಣಾಟಕ ಕಥಾ ಮಂಜರಿ ಕಾವ್ಯವು ಅಮೃತಸುಧೆಯಾಗಿದೆ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಟ್ರಸ್ಟ್ ಅಧ್ಯಕ್ಷ ಅನಂತರಾಮಯ್ಯ,

ಕಾರ್ಯದರ್ಶಿ ವೈ.ಟಿ.ರಮೇಶ್, ವೈ.ಎಸ್.ರವಿಪ್ರಕಾಶ್, ಬಿಜೆಪಿ ಮಂಡಲಾಧ್ಯಕ್ಷ

ಬಿ.ಪಿ.ದೇವಾನಂದ್, ಜಿಗಣೇಹಳ್ಳಿ ನೀಲಕಂಠಪ್ಪ, ಬಿದರೆ ಜಗದೀಶ್, ಕಂಸಾಗರ

ರೇವಣ್ಣ, ಚೇತನ್ ಕೆಂಪರಾಜ್ ಮತ್ತಿತರಿದ್ದರು.