ಚಿಕ್ಕಬಳ್ಳಾಪುರ: ಭಜನೆ, ಗಾಯನ, ಅನ್ನಸಂತರ್ಪಣೆ ಸೇರಿ ವಿವಿಧ ಆಧ್ಯಾತ್ಮಿಕ ಮತ್ತು ಸಾಂಸತಿಕ ಕಾರ್ಯಕ್ರಮಗಳೊಂದಿಗೆ ಜಿಲ್ಲಾದ್ಯಂತ ಮಹಾ ಶಿವರಾತ್ರಿ ಹಬ್ಬವನ್ನು ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಬೆಳಗ್ಗೆಯಿಂದಲೇ ಶಿವನ ಆಲಯಗಳಿಗೆ ಭೇಟಿ ನೀಡಿದ ಭಕ್ತರು ಉಪವಾಸ, ಜಾಗರಣೆ ಮೂಲಕ ಶಿವನಾಮ ಸ್ಮರಣೆ ಮಾಡಿದರು. ನಗರದ ಶ್ರೀ ಮರಳು ಸಿದ್ದೇಶ್ವರಸ್ವಾಮಿ ಆಲಯ, ಕೃಷ್ಣ ಟಾಕೀಸ್ ರಸ್ತೆ, ಬಸವನಗುಡಿ ರಸ್ತೆ ಯಲ್ಲಿರುವ ಹಳೇ ಈಶ್ವರನಗುಡಿ ಸೇರಿ ವಿವಿಧೆಡೆ ದೇವಾಲಯಗಳಲ್ಲಿ ಹಬ್ಬದ ಪ್ರಯುಕ್ತ ದೇವರಿಗೆ ಅಲಂಕಾರ ಮತ್ತು ಅಭಿಷೇಕ ಸೇವೆಗಳು ನೆರವೇರಿದವು.
ಧ್ಯಾನ ಕೇಂದ್ರದಲ್ಲಿ ಭಕ್ತರ ಕಲರವ: ತಾಲೂಕಿನ ಹನುಮಂತಪುರ ಸಮೀಪದ ಈಶ ಫೌಂಡೇಷನ್ನ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ಮಹಾಶಿವರಾತ್ರಿಯ ಪೂಜಾ ಕಾರ್ಯಕ್ರಮ ಸಂಪ್ರದಾಯ ಬದ್ಧವಾಗಿ ನಡೆಯಿತು. ಕೊಯಮತ್ತೂರಿನಲ್ಲಿನ ಅದ್ದೂರಿ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ಶಿವನಾಮ ಸ್ಮರಣೆ: ಪ್ರತಿವರ್ಷದಂತೆ ಮನೆ, ದೇಗುಲದಲ್ಲಿ ಸಂಭ್ರಮ ಮನೆ ಮಾಡಿತ್ತು. ಜನರು ಉಪವಾಸವಿದ್ದು ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದಲ್ಲಿ ದರ್ಶನ ಪಡೆದು ಎಡೆ ಊಟ ಸವಿದರು. ಶ್ರೀ ಶಕ್ತಿ ವಿನಾಯಕ ಯುವಕರ ಬಳಗದಿಂದ ನಗರದ ಭುವನೇಶ್ವರಿ ವೃತ್ತದಲ್ಲಿರುವ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ಕೈಗೊಳ್ಳಲಾಯಿತು. ದೇವರಿಗೆ ಪಂಚಾಮೃತ ಅಭಿಷೇಕ, ಬೆಳಗ್ಗೆ ಹಾಗೂ ಸಂಜೆ ವಿಶೇಷ ಅಲಂಕಾರ ಮಾಡಲಾಗಿತ್ತು.
ನಂದಿಯತ್ತ ಭಕ್ತರು: ತಾಲೂಕಿನ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ಆಲಯಕ್ಕೆ ವಿವಿಧೆಡೆಯಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ದೇವರಿಗೆ ಏಕವಾರ ಅಭಿಷೇಕ, ಏಕದಶವಾರ ರುದ್ರಾಭಿಷೇಕ ಮಾಡಲಾಯಿತು. ಹಂಸ ವಾಹನೋತ್ಸವ, ಶ್ರೀ ಗಿರಿಜಾಂಬ ಮತ್ತು ಶ್ರೀ ಭೋಗನಂದೀಶ್ವರ ಸ್ವಾಮಿಯವರ ಕಲ್ಯಾಣೋತ್ಸವ ಅದ್ದೂರಿಯಾಗಿ ನೆರವೇರಿತು. ಆಲಯದ ಆವರಣದಲ್ಲಿ ನಡೆದ ಶಿವಕಥೆ, ಹರಿಕಥೆ ಮತ್ತು ಭಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಹಬ್ಬದ ಪ್ರಯುಕ್ತ ತೆರೆದಿದ್ದ ತಿಂಡಿ ತಿನಿಸುಗಳ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು.
ಹುತ್ತದಲ್ಲಿ ಲಿಂಗ ಉದ್ಭವ: ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಪ್ರಜಾಪಿತ ಬಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯದಿಂದ ಹುತ್ತದಲ್ಲಿ ಲಿಂಗ ಉದ್ಭವ ಪ್ರದರ್ಶನವು ಭಕ್ತರನ್ನು ಆಕರ್ಷಿಸಿತು. ವಿವಿಧ ಹೂವುಗಳಿಂದ ಅಲಂಕೃತಗೊಂಡಿದ್ದ ಶಿವಲಿಂಗದ ದರ್ಶನ ಪಡೆದ ಭಕ್ತರು ಪುನೀತರಾದರು. ಅಲ್ಲದೇ ಕಲ್ಯಾಣ ಮಂಟಪದಲ್ಲಿ ಆಧ್ಯಾತ್ಮಿಕ ಚಿತ್ರಪ್ರದರ್ಶನ ಏರ್ಪಡಿಸಲಾಗಿತ್ತು. ಜತೆಗೆ, ಶಿವರಾತ್ರಿ ಆಚರಣೆಯ ಮಹತ್ವವನ್ನು ಭಕ್ತರಿಗೆ ವಿವರಿಸಲಾಯಿತು.
ನಂದಿ ರಾಸುಗಳ ಜಾತ್ರೆ : ಪ್ರತಿವರ್ಷದಂತೆ ನಂದಿ ಜಾತ್ರೆ ಅಂಗವಾಗಿ ನಡೆಯುತ್ತಿರುವ ರಾಸುಗಳ ಜಾತ್ರೆಗೆ ರಾಜ್ಯ ಮಾತ್ರವಲ್ಲದೇ ಆಂಧ್ರ ಸೇರಿ ವಿವಿಧೆಡೆಯಿಂದ ಜಾನುವಾರುಗಳು ಆಗಮಿಸಿವೆ. ಭರ್ಜರಿ ವ್ಯಾಪಾರ ನಡೆಯುತ್ತಿದೆ. ಇನ್ನೂ ಕೊನೆಯ ದಿನ ದೇವಾಲಯ ಆಡಳಿತ ಮಂಡಳಿಯಿಂದ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಗುತ್ತದೆ.
ಇಂದು ಬ್ರಹ್ಮರಥೋತ್ಸವ: ಹಬ್ಬದ ಅಂಗವಾಗಿ ೆ.27ರಂದು ಬೆಳಗ್ಗೆ 11.45ಕ್ಕೆ ಶ್ರೀ ಭೋಗನಂದೀಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದೆ. ಚಿಕ್ಕ ರಥದಲ್ಲಿ ಅಂಬಿಕಾ ಮತ್ತು ದೊಡ್ಡ ರಥದಲ್ಲಿ ಗಿರಿಜಾಂಬ ಸಮೇತ ಶ್ರೀ ಭೋಗನಂದೀಶ್ವರ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ನಡೆಯುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ. ಸುಧಾಕರ್ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಪ್ರದಿಪ್ ಈಶ್ವರ್ ಸೇರಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.