ಜಿಲ್ಲೆ

ದೇಶದ ಸಮಗ್ರತೆಗೆ ಸಂವಿಧಾನ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ದೇಶದ ಸಮಗ್ರತೆಗೆ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನ ಪೀಠಿಕೆ ಸರ್ವಕಾಲೀಕವಾಗಿದ್ದು ಇಂದೂ ಸಹ ಮಹತ್ತರ ಪಾತ್ರವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದರು.

ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಹಮ್ಮಿಕೊಂಡಿದ್ದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಬಡವರ ದೀನ ದಲಿತರ, ಶೋಷಿತ ವರ್ಗಗಳ ಅಭಿವೃದ್ಧಿಗೆ ದುಡಿದರು. ಸಮಾಜದ ಪ್ರತಿ ಪ್ರಜೆಗೂ ಸಮಾನತೆ ಸಿಗಬೇಕು ಎನ್ನುವುದು ಅವರ ಆಶಯವಾಗಿತ್ತು ಎಂದು ಸ್ಮರಿಸಿದರು. ಪ್ರತಿಯೊಬ್ಬರೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಾರ್ಗದರ್ಶನ ಹಾಗೂ ಸಂವಿಧಾನದ ಆಶಯಗಳನ್ನು ಪಾಲಿಸೋಣ ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.ಜಗತ್ತಿನ ನಾನಾ ದೇಶಗಳಲ್ಲಿನ ಕಾನೂನುಗಳನ್ನು ಅಧ್ಯಯನ ಮಾಡಿದ ಅಂಬೇಡ್ಕರ್ ಅವರಿಗೆ ಸಂವಿಧಾನ ರಚಿಸುವ ಜವಾಬ್ದಾರಿ ವಹಿಸಲಾಗಿತ್ತು. ದಲಿತರು, ಮಹಿಳೆಯರು ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಅವರು ಪ್ರತಿಪಾದಿಸಿದರು ಮತ್ತು ಸಮಾಜದಲ್ಲಿ ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಡಿದ್ದರು ಎಂದರು.

ಪುಣ್ಯತಿಥಿ: ಪ್ರತಿ ವರ್ಷ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ದೇಶದಾದ್ಯಂತ ಮಹಾಪರಿನಿರ್ವಾಣ ದಿವಸ್ ಎಂದು ಸ್ಮರಿಸಲಾಗುತ್ತದೆ. ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗು ತೊಡೆದುಹಾಕಲು ಅಂಬೇಡ್ಕರ್ ಅವರ ಹೋರಾಟ ಮಹತ್ತರವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಹೇಳಿದರು. ಸಂವಿಧಾನದಲ್ಲಿನ ಅಂಬೇಡ್ಕರ್ ಅವರು ಸಮಸಮಾಜದ ಆಶಯಗಳನ್ನು ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ಅರಿತು ಎಲ್ಲರೂ ನಡೆಯಬೇಕು ಎಂದು ಕರೆ ನೀಡಿದರು.

ಭಾವಚಿತ್ರಕ್ಕೆ ಪುಷ್ಪಾರ್ಚನೆ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಜಿಲ್ಲಾಡಳಿತ ಸಿಬ್ಬಂದಿ ಅಂಬೇಡ್ಕರ್ ಅವರ ಆಶಯಗಳ ಬಗ್ಗೆ ತತ್ವಾದರ್ಶಗಳ ಬಗ್ಗೆ ಗುಣಗಾನ ಮಾಡಿದರು.