ಮೂಡಿಗೆರೆ: ಕಾರ್ಗಿಲ್ ವಿಜಯೋತ್ಸವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಯುವ ಮೋರ್ಚಾದಿಂದ 25, 26ರಂದು ಅದ್ದೂರಿಯಾಗಿ ಕಾರ್ಗಿಲ್ ವಿಜಯೋತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅವಿನಾಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.25ರಂದು ಬೆಳಗ್ಗೆ 9 ಗಂಟೆಗೆ ಪಟ್ಟಣದ ಅಮರ್ ಜವಾನ್ ಸ್ಮಾರಕ ವೃತ್ತದಿಂದ ವಿಜಯಜ್ಯೋತಿ ಯಾತ್ರೆ ರಥಕ್ಕೆ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಮಲ್ಲಿಕಾರ್ಜುನ ಬಾಳೆಕಾಯಿ ಚಾಲನೆ ನೀಡಲಿದ್ದಾರೆ. ನಂತರ ರಥ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ನಂತರ ಆಲ್ದೂರು, ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಎನ್.ಆರ್.ಪುರಕ್ಕೆ ತೆರಳಲಿದೆ ಎಂದು ತಿಳಿಸಿದರು.
ಜು.26ರಂದು ಬೆಳಗ್ಗೆ 9 ಗಂಟೆಗೆ ಲಕ್ಕವಳ್ಳಿಯಿಂದ ಪ್ರಾರಂಭಿಸಿ ತರೀಕೆರೆ, ಬೀರೂರು, ಕಡೂರು, ಸಖರಾಯಪಟ್ಟಣ ಮೂಲಕ ಚಿಕ್ಕಮಗಳೂರು ನಗರಕ್ಕೆ ಆಗಮಿಸಲಿದ್ದು, ಸಂಜೆ ಪಂಜಿನ ಮೆರವಣಿಗೆಯೊಂದಿಗೆೆ ಆಜಾದ್ ಪಾರ್ಕ್‌ಗೆ ಸಾಗಿ ಬೃಹತ್ ಬಹಿರಂಗ ಸಭೆ ನಡೆಯಲಿದೆ. ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವುದು ಭಾರತೀಯರ ಕರ್ತವ್ಯವಾಗಿದೆ. ಹಾಗಾಗಿ ಎಲ್ಲ ಪಕ್ಷ, ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿಗಳು ಕಾರ್ಗಿಲ್ ವಿಜಯೋತ್ಸವಕ್ಕೆ ಆಗಮಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪಪಂ ಸದಸ್ಯ ಮನೋಜ್‌ಕುಮಾರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಬಾಲುಶೆಟ್ಟಿ, ತಾಲೂಕು ಅಧ್ಯಕ್ಷ ತಾರೇಶ್, ಪ್ರಧಾನ ಕಾಯದರ್ಶಿ ಶಶಿ ಕೆಲ್ಲೂರು ಉಪಸ್ಥಿತರಿದ್ದರು.