ಉಡುಪಿ: ಕರೊನಾ ಪ್ರತಿಬಂಧಕ ಕೋವಿಶೀಲ್ಡ್ ಲಸಿಕೆ ಪಡೆದ ಉಡುಪಿಯ ವ್ಯಕ್ತಿಯೊಬ್ಬರಲ್ಲಿ ಅಯಸ್ಕಾಂತೀಯ ಲಕ್ಷಣಗಳು ಕಂಡುಬಂದಿದ್ದು, ಭುಜ, ಹಣೆ, ಹೃದಯಭಾಗಗಳಲ್ಲಿ ಸ್ಟೀಲ್ ಚಮಚ, ನಾಣ್ಯಗಳು ಅಂಟಿಕೊಳ್ಳುತ್ತಿವೆ. ಆದರೆ ಈ ಬೆಳವಣಿಗೆಗೆ ಲಸಿಕೆ ಕಾರಣ ಎಂಬುದನ್ನು ಜಿಲ್ಲಾಡಳಿತ ನಿರಾಕರಿಸಿದ್ದು, ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದೆ.
ನಗರದ ಪಿಪಿಸಿ ಕಾಲೇಜು ಸಮೀಪ ನಿವಾಸಿ ರಾಮ್ ದಾಸ್ ಶೇಟ್ (52) ಅವರಲ್ಲಿ ಅಯಸ್ಕಾಂತೀಯ ಗುಣಲಕ್ಷಣ ಕಾಣಿಸಿಕೊಂಡಿದೆ. ನಾಸಿಕ್‌ನಲ್ಲಿ ಇತ್ತೀಚೆಗೆ ಕೋವಿಡ್ ಲಸಿಕೆ ಪಡೆದ ವ್ಯಕ್ತಿಯಲ್ಲಿ ಅಯಸ್ಕಾಂತೀಯ ಲಕ್ಷಣ ಗೋಚರಿಸಿದ್ದು, ವಾಟ್ಸಾೃಪ್‌ನಲ್ಲಿ ಬಂದ ವೀಡಿಯೋ ನೋಡಿ ತಾವೂ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಅಚ್ಚರಿಯಾಗಿದ್ದು, ಕಬ್ಬಿಣದ ಚಮಚ, ಸವುಟು, ಕಾಯಿನ್ ಇತ್ಯಾದಿ ವಸ್ತುಗಳನ್ನು ಅವರ ದೇಹ ಹಿಡಿದುಕೊಂಡಿತ್ತು. ಇದನ್ನು ವಿಡಿಯೋ ಮಾಡಿದ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರಿಂದ ವೈರಲ್ ಆಗಿದೆ.
ವರದಿಯಲ್ಲಿ ತಿಳಿಯಲಿದೆ
ಭಾನುವಾರ ರಾತ್ರಿ ಕುತೂಹಲಕ್ಕೆ ಪರಿಶೀಲಿಸಿದಾಗ ಲೋಹದ ವಸ್ತುಗಳು ದೇಹಕ್ಕೆ ಅಂಟಿಕೊಳ್ಳುತ್ತಿರುವುದು ತಿಳಿದಿದೆ. ಹಿಂದೆ ಇಂತಹ ಅನುಭವ ಆಗಿಲ್ಲ. ಜಿಲ್ಲಾಧಿಕಾರಿ ಸೂಚನೆಯಂತೆ ಜಿಲ್ಲಾಸ್ಪತ್ರೆಯಲ್ಲಿ ಬಿಪಿ, ಶುಗರ್, ಇಸಿಜಿ, ರಕ್ತ ಪರೀಕ್ಷೆ ಮಾಡಿದ್ದಾರೆ. ಹೆಚ್ಚಿನ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆೆ. ವರದಿ ಬಳಿಕವೇ ಸತ್ಯ ತಿಳಿಯಲಿದೆ ಎಂದು ರಾಮ್‌ದಾಸ್ ಶೇಟ್ ವಿಜಯವಾಣಿಗೆ ತಿಳಿಸಿದ್ದಾರೆ.
ಜಿಲ್ಲಾಡಳಿತ ನಿರಾಕರಣೆ
ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ವ್ಯಕ್ತಿಯೊಬ್ಬರಲ್ಲಿ ಮ್ಯಾಗ್ನೆಟಿಕ್ ಪವರ್ ಇರುವ ಬಗ್ಗೆ ವರದಿಯಾಗಿದ್ದು, ಅದಕ್ಕೂ ಕೋವಿಡ್ ಲಸಿಕೆಗೂ ಸಂಬಂಧವಿಲ್ಲ. ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಹಣೆ, ಭುಜ, ಬೆನ್ನು, ಕೈಯಲ್ಲಿ ಅಯಸ್ಕಾಂತೀಯ ಗುಣ ಇದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಕ್ಸಿನ್‌ನಿಂದ ಹೀಗಾಗಿದೆ ಎಂದು ಕೆಲವರು ಹೇಳಿದ್ದಾರೆ. ಅದು ಸರಿಯಲ್ಲ. ಏ.28ಕ್ಕೆ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಆದರೆ ಲಸಿಕೆಯಿಂದ ಅಯಸ್ಕಾಂತೀಯ ಗುಣ ಬರುವುದಿಲ್ಲ ಎಂದು ಡಿಸಿ ಹೇಳಿದ್ದಾರೆ.