ಜಿಲ್ಲೆ

ಫೆ.4, 5ರಂದು ಮಾಘ ಶುದ್ಧ ಪೌರ್ಣಮಿ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿಕೆ

ಮಂಡ್ಯ: ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದಲ್ಲಿ ಫೆ.4 ಹಾಗೂ 5ರಂದು ಮಾಘ ಶುದ್ಧ ಹುಣ್ಣಿಮೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಘ ಶುದ್ಧ ಹುಣ್ಣಿಮೆ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಘ ಹುಣ್ಣಿಮೆ ದಿನದಂದು ಭಕ್ತರು ಕಾವೇರಿ ನದಿಯಲ್ಲಿ ಸ್ನಾನ ಮಾಡಲಿದ್ದು, ನೀರಿನ ಹರಿವಿನ ಪ್ರಮಾಣವನ್ನು ಅಗತ್ಯಕ್ಕೆ ತಕ್ಕಂತೆ ಒದಗಿಸುವಂತೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್‌ಗೆ ರಾಮಮೂರ್ತಿಗೆ ಸೂಚಿಸಿದರು.

ಮುನ್ನೆಚ್ಚರಿಕಾ ಕ್ರಮವಾಗಿ ಸ್ನಾನಘಟ್ಟದ ಬಳಿ ನುರಿತ ಈಜುಗಾರರು ಮತ್ತು ದೋಣಿಗಳನ್ನು ನಿಯೋಜಿಸಬೇಕು. ಅಂತೆಯೇ ತಾತ್ಕಾಲಿಕ ಬಟ್ಟೆ ಬದಲಾಯಿಸುವ ಕೊಠಡಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಮಾಡಬೇಕು. ಹೆಚ್ಚಿನ ಭಕ್ತರು ಭಾಗವಹಿಸುವುದರಿಂದ ನಿರಂತರವಾಗಿ ಸ್ವಚ್ಛತಾ ಕೆಲಸಗಳು ನಡೆಯುವಂತೆ ನೋಡಿಕೊಳ್ಳಬೇಕು. ಭಕ್ತರು ನದಿಯ ಸ್ವಚ್ಛತೆಯನ್ನು ಕಾಪಾಡಬೇಕು. ಸೋಪು, ಶ್ಯಾಂಪೂಗಳನ್ನು ಬಳಸಬಾರದು. ಬಟ್ಟೆಗಳನ್ನು ನದಿ ನೀರಿನಲ್ಲಿ ಬಿಡಬಾರದು. ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿ ಹಾಗೂ ವಸ್ತುಗಳನ್ನು ನದಿ ನೀರಿನಲ್ಲಿ ಬಿಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು ಎಂದರು.

ಬ್ಯಾಟರಿ ಚಾಲಿತ ವಾಹನ: ಅಂಗವಿಕಲರು ಹಾಗೂ ವಯಸ್ಸಾದವರಿಗೆ ವಾಹನ ಪಾರ್ಕಿಂಗ್ ಸ್ಥಳದಿಂದ ದೇವಸ್ಥಾನದವರೆಗೆ ಎರಡು ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆ ಮಾಡಬೇಕು. ಕಾನೂನು ಹಾಗೂ ಸುವ್ಯವಸ್ಥೆ ಪಾಲನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆರಕ್ಷಕ ಸಿಬ್ಬಂದಿಯನ್ನು ನಿಯೋಜಿಸಬೇಕು. ಅಗತ್ಯವಿರುವ ಕಡೆ ಸಿಸಿ ಕ್ಯಾಮೆರಾ ಅಳವಡಿಸುವುದರ ಜತೆಗೆ ಪಾರ್ಕಿಂಗ್, ಸುಗಮ ಸಂಚಾರದ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆಯಿಂದ ತುರ್ತು ಆರೋಗ್ಯ ಸೇವೆ ಒದಗಿಸಲು ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಬೇಕು. ವೈದ್ಯರು, ಸಿಬ್ಬಂದಿ, ಔಷಧ, ಆಂಬ್ಯುಲೆನ್ಸ್ ವ್ಯವಸ್ಥೆಯಾಗಬೇಕು. ಆಹಾರ ಸುರಕ್ಷತಾ ಅಧಿಕಾರಿಗಳು ಭಕ್ತರಿಗೆ ವಿತರಿಸುವ ಪ್ರಸಾದವನ್ನು ಪೂರ್ವ ಪರೀಕ್ಷೆಗೆ ಒಳಪಡಿಸಿ ನಂತರ ವಿತರಣೆ ಮಾಡುವ ವ್ಯವಸ್ಥೆಯಾಗಬೇಕು ಎಂದು ಸೂಚನೆ ನೀಡಿದರು.

ನಿಮಿಷಾಂಭ ದೇವಾಲಯದ ಅರ್ಚಕ ಸೂರ್ಯ ನಾರಾಯಣ್‌ಭಟ್ ಮಾತನಾಡಿ, ದೇವಾಲಯದಲ್ಲಿ ಫೆ.4ರಂದು ರಾತ್ರಿ 1 ಗಂಟೆಯಿಂದ ಅಭಿಷೇಕ ಹಾಗೂ ಪೂಜಾ ಕೈಂಕರ್ಯ ಕೈಗೊಳ್ಳಲಾಗುವುದು. ನಂತರ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ನಿಮಿಷಾಂಭ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಮುಜರಾಯಿ ತಹಸೀಲ್ದಾರ್ ಉಮಾ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.