ಮಂಡ್ಯ: ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಬ ದೇವಸ್ಥಾನದಲ್ಲಿ ಫೆ.11 ಮತ್ತು 12ರಂದು ನಡೆಯಲಿರುವ ಮಾಘ ಶುದ್ಧ ಹುಣ್ಣಿಮೆಯಲ್ಲಿ ಸುಮಾರು ಒಂದು ಲಕ್ಷ ಜನರು ಭಾಗವಹಿಸುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಲೋಪವಾಗದಂತೆ ಸಿದ್ಧತೆ ಮಾಡಿಕೊಳ್ಳಿ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾಘ ಹುಣ್ಣಿಮೆಯ ಪ್ರಯುಕ್ತ ದೇವಾಲಯಕ್ಕೆ ಬರುವ ಭಕ್ತರಿಗೆ ಪುಣ್ಯಸ್ನಾನಕ್ಕೆ ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಅನಗತ್ಯ ನೂಕು ನುಗ್ಗಲು ತಡೆಯಲು ಬ್ಯಾರಿಕೇಡಿಂಗ್ ವ್ಯವಸ್ಥೆ, ಸೂಕ್ತ ಸ್ಥಳಗಳಲ್ಲಿ ಆರಕ್ಷಕ ಸಿಬ್ಬಂದಿ ನಿಯೋಜಿಸುವಂತೆ ತಿಳಿಸಿದರು.
ಮಹಿಳೆಯರು ಬಟ್ಟೆ ಬದಲಾಯಿಸಲು ತಾತ್ಕಾಲಿಕ ಶೆಡ್‌ಗಳ ನಿರ್ಮಾಣವಾಗಬೇಕು. ಈ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ದೇವಸ್ಥಾನದ ಬಳಿ ಅಗ್ನಿಶಾಮಕ ಸಿಬ್ಬಂದಿ, ನುರಿತ ಈಜುಗಾರರು, ನದಿ ತೀರದಲ್ಲಿ ಜೀವ ರಕ್ಷಕ ಜಾಕೆಟ್ ಮತ್ತು ಇತರ ರಕ್ಷಣಾ ಸಾಮಗ್ರಿಗಳೊಂದಿಗೆ ಸಿಬ್ಬಂದಿ ಸನ್ನದ್ಧರಾಗಿರಬೇಕು. ಎರಡು ದಿನ ಸಂಚಾರ ದಟ್ಟಣೆ ಹೆಚ್ಚಾಗುವುದರಿಂದ ಸುಗಮ ಸಂಚಾರಕ್ಕಾಗಿ ಶ್ರೀರಂಗಪಟ್ಟಣ ಕಡೆಯಿಂದ ಏಕಮುಖ ಸಂಚಾರ ಮಾಡುವ ವ್ಯವಸ್ಥೆಯಾಗಬೇಕು. ಮೈಸೂರು, ಮಂಡ್ಯ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ. ಆದ್ದರಿಂದ ಮೈಸೂರು ಮತ್ತು ಶ್ರೀರಂಗಪಟ್ಟಣದಿಂದ ದೇವಾಲಯದ ಕಡೆ ಹೆಚ್ಚುವರಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. 11ರಂದು ರಾತ್ರಿ 10 ಗಂಟೆಯಿಂದ 12ರಂದು ಬೆಳಗ್ಗೆ 8 ಗಂಟೆವರೆಗೂ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಿ. ಭಜನೆ, ಹರಿಕಥೆ, ಭರತನಾಟ್ಯ ಆಯೋಜನೆ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ವಾಹನಗಳನ್ನು ದೇವಸ್ಥಾನದ ಹತ್ತಿರಕ್ಕೆ ಬಿಡದೆ ನಿಗದಿತ ದೂರದ 2 ಸ್ಥಳಗಳನ್ನು ಗುರುತಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಈ ಸ್ಥಳದಲ್ಲಿ ಸೂಕ್ತ ವಿದ್ಯುತ್ ದೀಪದ ವ್ಯವಸ್ಥೆ ಇರಲಿದೆ. ಶ್ರೀರಂಗಪಟ್ಟಣದಿಂದ ಗಂಜಾಂಗೆ ವಿಶೇಷ ಬಸ್ ನಿಯೋಜಿಸಲಾಗುವುದು. ಆಗಮಿಸುವ ಭಕ್ತರಿಗೆ ಕೊರತೆ ಉಂಟಾಗದ ರೀತಿಯಲ್ಲಿ ಪ್ರಸಾದ ವಿನಿಯೋಗ ನಡೆಯಲಿದೆ.ಪ್ರಸಾದ ತಯಾರಿಸುವ ಸ್ಥಳದಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಕೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನಿಯೋಜಿಸಿ ಆಹಾರ ಪರೀಕ್ಷೆ ಮಾಡುವ ವ್ಯವಸ್ಥೆಯಾಗಬೇಕು ಎಂದರು.
ಸಾರ್ವಜನಿಕರ ಸಂಖ್ಯೆ ಹೆಚ್ಚು ಸೇರುವುದರಿಂದ ಸ್ವಚ್ಛತೆ ಕಡೆ ಹೆಚ್ಚು ಗಮನ ಹರಿಸಬೇಕಾಗಿದೆ. ನದಿ ತೀರದಲ್ಲಿ ಕಸ ಕಡ್ಡಿಗಳನ್ನು ತೆರವುಗೊಳಿಸಿ ಸ್ವಚ್ಛವಾಗಿ ಕಾಯ್ದಿಟ್ಟುಕೊಳ್ಳಬೇಕು. ನದಿಯಲ್ಲಿ ಸ್ನಾನ ಮಾಡುವ ಭಕ್ತಾದಿಗಳು ಶಾಂಪು, ಸೋಪು ಬಳಸದಂತೆ ಕ್ರಮ ವಹಿಸುವುದು. ಹೆಚ್ಚಿನ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ದೇವಸ್ಥಾನದ ಆವರಣದಲ್ಲಿ ಅಳವಡಿಸುವುದು. ನದಿಯ ಬಳಿ ಧ್ವನಿವರ್ಧಕ ಅಳವಡಿಸಿ ಎಚ್ಚರಿಕೆ ಸಂದೇಶಗಳನ್ನು ನೀಡಬೇಕು. ತುರ್ತು ಆರೋಗ್ಯ ಸೇವೆ ಒದಗಿಸಲು ಅಗತ್ಯವಿರುವ ಹೆಚ್ಚುವರಿ ಆರೋಗ್ಯ ಸಿಬ್ಬಂದಿ, ಔಷಧ, ಆಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುವುದು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಜನ ಸೇರುವ ಸ್ಥಳಗಳಲ್ಲಿ ಮಾಡಲಾಗುವುದು ಎಂದು ವಿವರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ನಿಮಿಷಾಂಬ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ ಇತರರಿದ್ದರು.