ಜಿಲ್ಲೆ

ತೆಂಗಿನ ಗೆರಟೆ ಪಡೆಯಿತು ಜೀವಕಳೆ, ಜಾದೂಗಾರನ ಕೈಯಲ್ಲಿ ಮೂಡಿತು ವಿವಿಧ ಕಲಾಕೃತಿ

Dakshina Kannada

ನಿಶಾಂತ್ ಶೆಟ್ಟಿ ಕಿನ್ನಿಗೋಳಿ 

ಲೋಲಾಕ್ಷ ಜಾದೂ... ಹಲವು ವರ್ಷಗಳಿಂದ ಕೇಳಿ ಬರುತ್ತಿರುವ ಪ್ರಸಿದ್ಧ ಹೆಸರು. ವಾರ್ಷಿಕೋತ್ಸವ, ಗಣೇಶೋತ್ಸವ ಮತ್ತಿತರ ಸಂದರ್ಭ ಜಾದೂ ಕಾರ್ಯಕ್ರಮ ನಡೆಸುತ್ತಾ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿಯೂ ಹೆಸರು ಗಳಿಸಿದವರು. ಇದೀಗ ತೆಂಗಿನ ಗೆರಟೆಗೆ ಬೇರೆ ಬೇರೆ ರೂಪ ಕೊಟ್ಟು ಜೀವಕಳೆ ನೀಡಿದ್ದಾರೆ.

ಮೂರು ತಿಂಗಳ ಲಾಕ್‌ಡೌನ್ ಸಂದರ್ಭ ವಿವಿಧ ಕಲಾಕೃತಿಗಳನ್ನು ಮಾಡಿರುವ ಲೋಲಾಕ್ಷ ಅವರು ಮೂಲತಃ ಕಿನ್ನಿಗೋಳಿ ಸಮೀಪದ ಗೋಳಿಜೋರ ಎಂಬ ಗ್ರಾಮೀಣ ಪ್ರದೇಶದ ಪ್ರತಿಭೆ. ಈ ಹಿಂದೆ ಬಿಎಸ್ಸೆನ್ನೆಲ್ ಉದ್ಯೋಗಿಯಾಗಿದ್ದು, ಇದೀಗ ಸ್ವಯಂ ನಿವೃತ್ತಿ ಹೊಂದಿದ್ದಾರೆ.

ಹಿಂದೆ ತಮ್ಮ ಬಿಡುವಿನ ವೇಳೆಯಲ್ಲಿ ಜಾದೂ ಕಾರ್ಯಕ್ರಮ ಮಾಡುತ್ತಿದ್ದರು. ಯುವಜನತೆ ಟಿವಿ, ಮೊಬೈಲ್ ಆಕರ್ಷಿತರಾದ ಕಾರಣ ಜಾದೂ ಕಾರ್ಯಕ್ರಮಗಳು ಖ್ಯಾತಿ ಕಳೆದುಕೊಳ್ಳಲಾರಂಭಿಸಿತು. ಅಲ್ಲದೆ ಎರಡು ವರ್ಷದಿಂದ ಕರೊನಾ ಕಾರಣ ಕಾರ್ಯಕ್ರಮಗಳಿಗೆ ನಿಷೇಧವಿದ್ದ ಪರಿಣಾಮ ನಾಟಕ, ಯಕ್ಷಗಾನ ಮಾತ್ರವಲ್ಲದೆ ಜಾದೂ ಕಾರ್ಯಕ್ರಮ ಆಯೋಜಿಸುವವರ ಸಂಖ್ಯೆಯೂ ಇಳಿಮುಖವಾಗಿದೆ. ಆದರಿಂದ ಲೋಲಾಕ್ಷ ಅವರು ತಮ್ಮ ಬಿಡುವಿನ ಸಮಯವನ್ನು ವ್ಯರ್ಥ ಮಾಡದೆ ತೆಂಗಿನ ಗೆರಟೆ ಮೂಲಕ ವಿವಿಧ ಕಲಾಕೃತಿ ಮಾಡಿ ಗಮನ ಸೆಳೆದಿದ್ದಾರೆ.

75ಕ್ಕೂ ಹೆಚ್ಚು ಕಲಾಕೃತಿ: ತೆಂಗಿನ ಗೆರಟೆ ಮೂಲಕ ಮೀನು, ಆಮೆ, ದೀಪ, ಚಿಟ್ಟೆ, ಬುಟ್ಟಿ, ಟೀಕಪ್, ಸೈಕಲ್, ಸ್ಕೂಟರ್, ಗೂಬೆ ಹೀಗೆ ವಿವಿಧ ರೀತಿಯ ಸುಮಾರು 75ಕ್ಕೂ ಹೆಚ್ಚು ರೀತಿಯ ಕಲಾಕೃತಿ ಮಾಡಿದ್ದು, ಅತ್ಯಂತ ಆಕರ್ಷಣಿಯವಾಗಿದೆ. ಬ್ಲೇಡ್, ಅರ, ಗ್ರೈಂಡರ್ ಉಪಯೋಗಿಸಿ ಗೆರಟೆಯನ್ನು ಬೇಕಾದ ಆಕಾರದಲ್ಲಿ ತುಂಡರಿಸಿ ಕಲಾಕೃತಿಯನ್ನು ಮಾಡುತ್ತಿದ್ದಾರೆ. ಇದಕ್ಕೆ ಪಾಲಿಷ್ ಮಾಡಿ ವಾರ್ನಿಶ್ ಲೇಪಿಸಿ ಕಲಾಕೃತಿ ಇನ್ನಷ್ಟು ಸುಂದರ ಕಾಣುವಂತೆ ಮಾಡಲಾಗಿದೆ. ಲೋಲಾಕ್ಷ ಅವರು ಬಿಡುವಿನ ಸಮಯದಲ್ಲಿ ತಮಗೆ ತೋಚಿದಂತೆ ಮಾಡಿದ್ದು, ಆದರೆ ಈಗ ಕಲಾಕೃತಿಗೆ ಸಾಕಷ್ಟು ಬೇಡಿಕೆ ಬರುತ್ತಿದೆ. ಇತ್ತೀಚೆಗೆ ಕಿನ್ನಿಗೋಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಈ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು ಬೇಡಿಕೆ ಹೆಚ್ಚಾಗಿದೆ. ಹಲವರು ಇವರನ್ನು ಸಂಪರ್ಕಿಸಿ ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಾಕೃತಿಯನ್ನು ಮಾಡುವ ಯೋಚನೆ ಇವರದ್ದಾಗಿದೆ.

ಲಾಕ್‌ಡೌನ್ ಸಂದರ್ಭ ಬಿಡುವಿನ ವೇಳೆಯಲ್ಲಿ ಸಮಯ ವ್ಯರ್ಥ ಮಾಡುವ ಬದಲು ಏನಾದರೂ ಮಾಡಬೆಂಕೆಂದು ಯೋಚಿಸಿದಾಗ ಹೊಳೆದದ್ದೇ ಈ ಕಲಾಕೃತಿಗಳು. ತೆಂಗಿನ ಗೆರಟೆಯನ್ನು ಉಪಯೋಗಿಸಿ ಕಲಾಕೃತಿ ರಚಿಸಿದ್ದೇನೆ. ಮಾರಾಟ ಮಾಡುವ ಉದ್ದೇಶದಿಂದ ರಚಿಸಿದ್ದಲ್ಲ. ಆದರೆ ಇದೀಗ ಸಾಕಷ್ಟು ಬೇಡಿಕೆಗಳು ಬರುತ್ತಿದೆ. ಲೋಲಾಕ್ಷ, ಕಲಾಕೃತಿ ರಚಿಸಿದವರು