ಜಿಲ್ಲೆ

ಮುಲಾಜಿಲ್ಲದೇ ತೆರಿಗೆ ವಸೂಲಿ ಮಾಡಿ

ರೇಷ್ಮೆ ನಗರ ಡೆಸ್ಕ್

ಮಾಗಡಿ: ಖಾಸಗಿ ಶಾಲೆ, ಕಲ್ಯಾಣ ಮಂಟಪ, ಸರ್ಕಾರಿ ಕಚೇರಿಗಳಿಂದ 1.35 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದು ಈ ಸಂಬಂಧ ತಮಟೆ ಭಾರಿಸಿ ತೆರಿಗೆ ವಸೂಲಿ ಮಾಡಿ, ಇಲ್ಲದಿದ್ದರೆ ಪುರಸಭೆ ಅಧಿಕಾರಿಗಳ ಮಾಸಿಕ ವೇತನ ತಡೆಹಿಡಿಯಲು ಜಿಲ್ಲಾಧಿಕಾರಿಗಳಿಗೆ ಶಿಪಾರಸ್ ಮಾಡಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಎಚ್ಚರಿಕೆ ನೀಡಿದರು.

ಪುರಸಭೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆಗೆ ಪ್ರತಿವರ್ಷ 3.66 ಕೋಟಿ ರೂ. ನಿರ್ವಹಣೆಗೆ ಭೇಟಿ ಇದ್ದು, ತೆರಿಗೆ ವಸೂಲಾತಿ ಮಾಡದೆ ನಿರ್ಲಕ್ಷ್ಯ ವಹಿಸಿರುವ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

31 ಅಂಗಡಿಮಳಿಗೆ ಶಿಥಿಲಗೊಂಡಿದ್ದು, ಅವುಗಳನ್ನು ತೆರವುಗೊಳಿಸಿ ನೂತನ ಮಳಿಗೆ ನಿರ್ಮಿಸಲಾಗುವುದು. ಬಹುತೇಕ ಹರಾಜಿನಲ್ಲಿ ಪಡೆದಿರುವ ಅಂಗಡಿ ಮಳಿಗೆಗಳ ಅವಧಿ ಮುಗಿದಿದ್ದು, ಮತ್ತೆ ಆ ಅಂಗಡಿ ಮಳಿಗೆಗಳನ್ನು ಇನ್ನೊಂದು ತಿಂಗಳಲ್ಲಿ ಬಹಿರಂಗ ಹರಾಜು ಮಾಡುವಂತೆ ಸೂಚಿಸಿದರು.

ಪಟ್ಟಣದ ಪ್ರಮುಖ ರಸ್ತೆ ಆರ್ ಆರ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು, ಕೆಂಪೇಗೌಡ ವೃತ್ತದಿಂದ, ಶಿವಕುಮಾರ ಸ್ವಾಮೀಜಿ ವೃತ್ತ ಮಾರ್ಗವಾಗಿ ಅಂಬೇಡ್ಕರ್ ಭವನದವರೆಗೆ ಶೀಘ್ರದಲ್ಲೇ ರಸ್ತೆ ವಿಸ್ತರಣೆ ಮಾಡಲಾಗುವುದು. ಪುರಸಭೆಯಲ್ಲಿ ದಾಖಲೆಗಳು ಕಳೆದುಹೊದರೆ ಅಧಿಕಾರಿಗಳನ್ನು ತಲೆದಂಡ ಮಾಡಲಾಗುವುದು. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಕೆಲಸ ಮಾಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಪರವಾಗಿ ಶಾಸಕರು ನಿಲ್ಲದೆ, ಅವರಿಗೆ ಬಿಸಿ ಮುಟ್ಟಿಸಿದರೆ ಮುಂದೆ ಸೋಮಾರಿ ಸಿಬ್ಬಂದಿ ಎಚ್ಚೆತ್ತುಕೊಳ್ಳುತ್ತಾರೆ. ಎಂದು ಶಾಸಕರಿಗೆ ಜೆಡಿಎಸ್ ಸದಸ್ಯ ಎಂ.ಎನ್.ಮಂಜುನಾಥ್ ಮನವಿ ಮಾಡಿದರು.
ಸಭೆಯಲ್ಲಿ ಕೆಲ ಸದಸ್ಯರು ಮುಖ್ಯಾಧಿಕಾರಿಗಳಿಗೆ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.
ಈ ವೇಳೆ ಶಾಸಕರು ಏಕವಚನದಲ್ಲಿ ಮಾತನಾಡದಂತೆ ತಿಳಿವಳಿಕೆ ನೀಡಿದರು. ಪುರಸಭೆಯಲ್ಲಿ ಖಾತೆ ಸೇರಿ ಇತರೆ ವಿಚಾರದಲ್ಲಿ ಅಕ್ರಮ ನಡೆದಿದ್ದರೆ ಲಿಖಿತವಾಗಿ ಪತ್ರ ನೀಡಿದರೆ ಮುಂದಿನ ಸಭೆಯಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಕಸ ವಿಲೇವಾರಿ ಮಾಡಲು ಕಸದ ತಳ್ಳುವ ಗಾಡಿ ಇಲ್ಲದೆ ಸಂಗ್ರಹಣೆಗೆ ಸಮಸ್ಯೆಯಾಗಿದ್ದು, ತಳ್ಳುವ ಗಾಡಿ ವಿತರಿಸುವಂತೆ ಸದಸ್ಯ ಅಶ್ವತ್ಥ್ ಶಾಸಕರಲ್ಲಿ ಮನವಿ ಮಾಡಿದರು.
ಸದಸ್ಯರಾದ ರೆಹಮತ್, ಶಿವರುದ್ರಮ್ಮ, ರಾಮು, ಎಂ.ಎನ್. ಮಂಜುನಾಥ್, ಭಾಗ್ಯಮ್ಮ, ಅನಿಲ್, ಹೇಮಲತಾ, ರಂಗಹನುಮಯ್ಯ, ಕಾಂತರಾಜು, ಜಯರಾಮು, ನಾಗರತ್ನಮ್ಮ, ಭಾಗ್ಯಮ್ಮ, ರೇಖಾ, ಆಶಾರಾಣಿ, ಮಮತಾ, ಆನಂದ್, ಪ್ರಕಾಶ್, ನುಸೀರ್ ಉಲ್ಲಾ ಇತರರು ಇದ್ದರು.

ಜಮೀನು ಗುರುತು : ಪಟ್ಟಣದಲ್ಲಿ ಉತ್ತಮ ಮಾರುಕಟ್ಟೆ, ಹೈಟೆಕ್ ಮಾರುಕಟ್ಡೆ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಪಟ್ಟಣದ ಘನ ತ್ಯಾಜ್ಯ ಘಟಕದಲ್ಲಿ ಕಸ ಸಂಸ್ಕರಣೆಯ ಕೋಟ್ಯಂತರ ರೂ. ಮೌಲ್ಯದ ಯಂತ್ರಗಳು ಕಳೆದ 2016 ರಿಂದಲ್ಲೂ ತುಕ್ಕು ಹಿಡಿದಿದ್ದು, ಈ ಬಗ್ಗೆ ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಶಾಸಕರು ಸೂಚಿಸಿದರು. ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು, ಕಸ ಸಂಸ್ಕರಣಾ ಘಟಕ ಸ್ಥಳಾಂತರಿಸಲು ಈಗಾಗಲೇ 10 ಎಕರೆ ಗೋಮಾಳ ಜಮೀನು ಗುರುತಿಸಲಾಗಿದೆ. ತ್ಯಾಜ್ಯ ಸಂಸ್ಕರಣೆಗೆ ಗೊಬ್ಬರ ತಯಾರಿಸಿ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದರು.