ಜಿಲ್ಲೆ

ಮಾಗಡಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಮುಂದಕ್ಕೆ

ಗಂಗಾಧರ ಬಿ ವಿ
  • ಏಳು ದಿನ ಮುಂಚಿತವಾಗಿ ನೋಟಿಸ್ ತಲುಪಿಲ್ಲವೆಂದು ನಿರ್ದೇಶಕರ ತಕರಾರು

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಯನ್ನು ಫೆ. 5ಕ್ಕೆ ಮುಂದೂಡಲಾಗಿದೆ. ಬುಧವಾರ ಚುನಾವಣೆ ನಿಗದಿಯಾಗಿದ್ದು, ನಿಯಮಗಳ ಪ್ರಕಾರ ಏಳು ದಿನ ಮುಂಚಿತವಾಗಿ ನೋಟಿಸ್ ಕೊಡಬೇಕು. ಆದರೆ ನಮಗೆ ನೋಟಿಸ್ ತಲುಪಿಲ್ಲ ಎಂದು ನಿರ್ದೇಶಕರು ತಕರಾರು ಮಾಡಿದರು. ಹೀಗಾಗಿ ಚುನಾವಣೆಯನ್ನು ಮುಂದೂಡಲಾಯಿತು.

ಚಂದ್ರೇಗೌಡ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಪಡಿಸಲಾಗಿತ್ತು. 9 ನಿರ್ದೇಶಕರಲ್ಲಿ ಕೆಲ ನಿರ್ದೇಶಕರಿಗೆ ಸಕಾಲದಲ್ಲಿ ನೋಟಿಸ್ ತಲುಪಿರಲಿಲ್ಲ ಎನ್ನಲಾಗಿದೆ. ಹೀಗಾಗಿ ನಿಯಮಗಳ ಪ್ರಕಾರ ನೋಟಿಸ್ ತಲುಪಿಸಿ ಚುನಾವಣೆ ಮಾಡಬೇಕು ಎಂದು ಕೆಲವು ಸದಸ್ಯರು ತಕರಾರು ತೆಗೆದರು. ಹೀಗಾಗಿ ಫೆ. 5ಕ್ಕೆ ಮುಂದೂಡಲಾಯಿತು. ಏಳು ನಿರ್ದೇಶಕರು ಇಂದಿನ ಸಭೆಗೆ ಆಗಮಿಸಿದ್ದರು.

ಶಾಸಕರ ಗಮನಕ್ಕೆ ತಂದಿರಲಿಲ್ಲ

ಕ್ಷೇತ್ರದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ವಿಎಸ್‌ಎಸ್‌ಎನ್ ಅಧ್ಯಕ್ಷರ ಚುನಾವಣೆಯನ್ನು ಶಾಸಕ ಎಚ್.ಸಿ. ಬಾಲಕೃಷ್ಣ ಗಮನಕ್ಕೆ ತರಲಾಗುತ್ತಿತ್ತು. ಆದರೆ ಮಾಗಡಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಯ ಮಾಹಿತಿಯನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಅವರ ಸಹೋದರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್. ಅಶೋಕ್ ಅವರ ಗಮನಕ್ಕೆ ತಂದಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಕೆಲ ನಿರ್ದೇಶಕರು ಅಪಸ್ವರ ಎತ್ತಿದ್ದರಿಂದ ಚುನಾವಣೆ ಮುಂದೂಡಲಾಯತು ಎಂದು ಗೊತ್ತಾಗಿದೆ. ಈ ಬಗ್ಗೆ ಪ್ರತಿಕ್ರಿಯೆಪಡೆಯಲು ಶಾಸಕ ಎಚ್.ಸಿ.ಬಾಲಕೃಷ್ಣ, ಬಿಡಿಸಿಸಿ ಬ್ಯಾಂಕ್ ನಿರ್ದೆಶಕ ಎಚ್.ಎನ್.ಆಶೋಕ್ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೂ ಕರೆ ಸ್ವೀಕರಿಸಲಿಲ್ಲ.

ಹುಸಿಯಾದ ನಿರೀಕ್ಷೆ

ಕೆಬ್ಬೆಪಾಳ್ಯ ನಾಗರಾಜು ಅವರಿಗೆ ಒಂದು ಅವಕಾಶ ಕಲ್ಪಿಸಲು ಕಳೆದ ಬಾರಿಯೇ ತೀರ್ಮಾನಿಸಲಾಗಿತ್ತು. ಆದರೆ, ಚಂದ್ರೇಗೌಡ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರಿಂದ ನಾಗರಾಜು ಅವಕಾಶ ವಂಚಿತರಾಗಿದ್ದರು. ಚಂದ್ರೇಗೌಡರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾದಾಗ ನಾಗರಾಜು ಅವರೇ ಬಹುತೇಕ ಅಧ್ಯಕ್ಷರಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ನೊಟೀಸ್ ನೆಪದಲ್ಲಿ ಅಧ್ಯಕ್ಷರ ಚುನಾವಣೆ ಮುಂದೂಡಲಾಯಿತು. ಕೆಬ್ಬೆಪಾಳ್ಯ ನಾಗರಾಜು ಅಧ್ಯಕ್ಷರಾಗಿ ಆಯ್ಕೆಯಾಗುವುದು ಗ್ಯಾರಂಟಿ ಎಂದು ಅವರ ಸ್ನೇಹಿತರು, ಬಂಧುಗಳು, ಮುಖಂಡರು ಹಾರ, ಶಾಲು, ಸಿಹಿಯೊಂದಿಗೆ ಆಗಮಿಸಿ ಶುಭಕೋರಲು ಉತ್ಸಕರಾಗಿದ್ದರು. ಆದರೆ ಚುನಾವಣೆ ಮುಂದೂಡಿದ ಕಾರಣ ಬೇಸರದಿಂದ ನಿರ್ಗಮಿಸಿದರು.

ಸಹಕಾರ ಇಲಾಖೆ ಅಧಿಕಾರಿಗಳು ಸಂಸದರ ಹಾಗೂ ಶಾಸಕರ ಕೈಗೊಂಬೆಯಾಗಿದ್ದಾರೆ. ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡುವ ಉದ್ದೇಶದಿಂದ ಬುಧವಾರ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿದೆ ಸಹಕಾರಿ ಕ್ಷೇತ್ರಗಳಲ್ಲಿ ಈ ರೀತಿ ಮಾಡುವುದು ಸರಿಯಲ್ಲ.

ಎ.ಮಂಜುನಾಥ್, ಮಾಜಿ ಶಾಸಕ.